ಯತ್ನಾಳ ಸಾಕ್ಷಿಯಾಗಿಸಿಕೊಂಡು ತನಿಖೇ ನಡೆಸಲಿ: ಡಿ.ಕೆ ಶಿವಕುಮಾರ್
ಹುಬ್ಬಳ್ಳಿ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಬೇಕಾದರೆ 2500 ಕೋಟಿ ರೂ.ಗಳನ್ನು ಸಿದ್ಧವಿಡಬೇಕು ಎಂದು ಅದೇ ಪಕ್ಷದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ ದೇಶವೇ ತಲ್ಲಣಗೊಳ್ಳುವ ಹೇಳಿಕೆ ನೀಡಿದ್ದು, ಈ ವಿಚಾರದಲ್ಲಿ ಸಿಎಂಗೆ ರಾಜಕೀಯ ಬದ್ಧತೆ ಇದ್ದರೆ ಪಕ್ಷದ ಗೌರವ ಉಳಿಸಿಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕೆ 50ರಿಂದ 100 ಕೋಟಿ ರೂ. ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ರಾಜ್ಯದ ಹಗರಣಗಳನ್ನು ಎಲ್ಲರೂ ಗಮನಿಸಿದ್ದಾರೆ. ಈ ಸರಕಾರ ಹುಟ್ಟಿದ್ದೇ ಶಾಸಕರ ಖರೀದಿ ಮೂಲಕ. ಬೇರೆ ಬೇರೆ ಶಾಸಕರಿಗೂ ಬಿಜೆಪಿ ಆಮಿಷ ಒಡ್ಡಿದ್ದನ್ನು ನಾವು ನೋಡಿದ್ದೇವೆ. ಇಂದು ರಾಜ್ಯದ ಜನತೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಲ್ಲ ನೇಮಕಾತಿಗಳಲ್ಲೂ ಸಹ ಒಂದೊಂದು ರೇಟ್ ಫಿಕ್ಸ್ ಆಗಿದೆ. ಹೋಟೆಲ್ ನಲ್ಲಿ ತಿಂಡಿ ಬೆಲೆಗೆ ರೇಟ್ ಹಾಕಿದಂತೆ ಇವರು ರೇಟ್ ಹಾಕಿದ್ದಾರೆಂದರು.
ಮುಖ್ಯಮಂತ್ರಿ ಮಾಡುವುದಕ್ಕೆ 2500 ಕೋಟಿ ಕೇಳಿದ್ದರು ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ, ಇಡಿ, ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆ ಕ್ರಮ ವಹಿಸಿಲ್ಲ. ಇದರಲ್ಲಿ ಯಾರು ಯಾರ ರಕ್ಷಣೆ ಮಾಡಲಾಗುತ್ತಿದೆ.
ಮುಖ್ಯಮಂತ್ರಿ ಯಾರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಅಲ್ಲದೇ ಯತ್ನಾಳ್ ಅವರನ್ನು ಕೂಡಲೇ ವಶಕ್ಕೆ ಪಡೆಯಬೇಕು. ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿ ದ್ದಾರೆ. ಅವರು ಸಹ ಮುಚ್ಚೋಕೆ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರೇ ಮಾಡಿರಲಿ ತನಿಖೆ ಆಗಲಿ. ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ ಮಾಡಿದರೆ ಅವರಿಗೆ ನೋಟಿಸ್ ಕೊಟ್ಟಿದ್ದೀರಿ. ಯತ್ನಾಳಗೆ ಯಾಕೆ ಕೊಟ್ಟಿಲ್ಲ. ಮಿಸ್ಟರ್ ಬಿಜೆಪಿ ಪ್ರೆಸಿಡೆಂಟ್, ಯಾಕೆ ಅಕ್ರಮ ಬಯಲಿಗೆಳೆಯುತ್ತಿಲ್ಲ. ಯಾವ ಮಂತ್ರಿ ಇದರಲ್ಲಿ ಭಾಗಿಯಾಗಿದ್ದರೂ ಅದರ ತನಿಖೆ ಆಗಬೇಕು. ಅವರ ವಿರುದ್ಧ ಕ್ರಮ ಆಗಲಿ. ನಾವು ಸಿಎಂ ರಾಜೀನಾಮೆಗೆ ಒತ್ತಾಯಿಸಲ್ಲ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಪಿಎಸ್‌ಐ ಗೋಲಮಾಲ್: ಹೆಸರು ಬಹಿರಂಗಗೊಳಿಸಿ
ಧಾರವಾಡ: ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮ ಪ್ರಕರಣದಲ್ಲಿ ಭಾಗಿಯಾದವರ ಹೆಸರುಗಳನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದರು.
ನಗರದಲ್ಲಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರ ಸಹೋದರನ ಅಗಲಿಕೆಯ ಹಿನ್ನೆಲೆಯಲ್ಲಿ ಚಿಂಚೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಿಐಡಿ ಅಧಿಕಾರಿಗಳು ಬಂಧಿಸಿದವರಲ್ಲಿ ಕೆಲವರನ್ನು ಸಚಿವರಾದ ಅರಗ ಜ್ಞಾನೇಂದ್ರ ಮತ್ತು ಡಾ.ಅಶ್ವಥ್ ನಾರಾಯಣ ಈಚೆ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರುಗಳು ವಿಚಾರಣೆಯ ವೇಳೆ ಬಂಧಿತರಿಂದ ಹೊರ ಬಂದಿವೆ. ಗೃಹ ಸಚಿವ ಮತ್ತು ಅಶ್ವಥ್ ನಾರಾಯಣ ಮೂಗಿನ ಕೆಳಗೆ ಎಲ್ಲ ತನಿಖೆ ನಡೆಯುತ್ತಿದೆ.
ಅಲ್ಲದೇ ಅನೇಕ ಹಿರಿಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದು, ಗೃಹ ಸಚಿವರು ತನಿಖೆ ಮಾಡುವವರನ್ನು ಫ್ರೀ ಹ್ಯಾಂಡ್ ಆಗಿ ಬಿಡಬೇಕು. ಏಕೆಂದರೆ ಗೃಹ ಸಚಿವರೇ ಅಪರಾಧಿಯಾಗಿದ್ದು, ಇದರಲ್ಲಿನ ಎಲ್ಲ ಕಳ್ಳರ ರಕ್ಷಣೆಯನ್ನು ಇವರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ತಾವು ಕ್ಲಿನ್ ಆಗಿ ಉಳಿದುಕೊಳ್ಳಬೇಕಿದೆ. ಸಿಎಂ ಇದರಲ್ಲಿ ಭಾಗಿ ಅಂತಾ ನಾ ಹೇಳಲಾರೆ ಎಂದ ಶಿವಕುಮಾರ, ಸಿಎಂ ಭಾಗಿಯಾಗಿಲ್ಲ ಅಂತಾದರೆ ಭಾಗಿಯಾದವರ ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಡಾ.ಅಶ್ವಥ್ ನಾರಾಯಣ ಅವರ ವೃತ್ತಿಯೇ ಇಂತಹ ಸರ್ಟಿಫಿಕೇಟ್ ಕೊಡಿಸುವಂತಹುದು. ಡಿಗ್ರಿ, ಬೋಗಸ್ ಸರ್ಟಿಫಿಕೇಟ್ ಕೊಡಿಸುವುದನ್ನು ಮಾಡಿದವರು. ಹೀಗಾಗಿ ಸಚಿವರ ರಾಜೀನಾಮೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅವರೇ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಹೇಳಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿಯವರ ಬಳಿ ಹೆಚ್ಚಿಗೆ ಮಾಹಿತಿ ಇದೆ ಎಂದರು.
ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಕೆಪಿಸಿಸಿ ಮಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಜತ ಉಳ್ಳಾಗಡ್ಡಿಮಠ, ಬಸವರಾಜ ಕಿತ್ತೂರ, ಸ್ವಾತಿ ಮಾಳಗಿ, ವಸಂತ ಅರ್ಕಾಚಾರ, ಯಾಸೀನ ಹಾವೇರಿಪೇಟ, ರೋಹಣ ಹಿಪ್ಪರಗಿ, ಸತೀಶ ತುರಮರಿ,ಪ್ರಭಾವತಿ ವಡ್ಡೀನ್, ನಿಜಾಮ ರಾಹಿ, ಹಜರತಅಲಿ ಗೊರವನಕೊಳ್ಳ ಇನ್ನಿತರರು ಜೊತೆಗಿದ್ದರು.