ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಾಸಕ ಅರವಿಂದ ಬೆಲ್ಲದರ ನಗರದ ನಿವಾಸಕ್ಕೆ ಭೇಟಿ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಬಾರಿ ಸಿಎಂ ರೇಸ್‌ನಲ್ಲಿದ್ದ ಅಲ್ಲದೇ ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಅವರ ವಿರೋಧಿ ಗುಂಪು ಎಂದೆ ಗುರುತಿಸಿಕೊಂಡಿರುವ ಬೆಲ್ಲದ ಅವರ ಗೋಕುಲ ರಸ್ತೆಯ ನಿವಾಸಕ್ಕೆ ಭೇಟಿ ನೀಡಿರುವುದು ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ನಿಕ್ಕಿ ಎಂಬ ಗುಸು ಗುಸುವಿಗೆ ಕಾರಣ ವಾಗಿದೆ.
ವಿಜಯೇಂದ್ರನನ್ನು ಸಂಪುಟದಿಂದ ದೂರವಿಡಲು ಬೆಲ್ಲದ್ ಜೊತೆಗೆ ಬೊಮ್ಮಾಯಿ ಕೈ ಜೋಡಿಸಲು ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದ್ದು ಇದುವರೆಗೂ ಬೆಲ್ಲದ ಜತೆಗೆ ಅಂತರ ಕಾಯ್ದುಕೊಂಡಿದ್ದ ಬೊಮ್ಮಾಯಿ
ಏಕಾಏಕಿ ಭೇಟಿ ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಬೆಲ್ಲದ ಹೇಳಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ಮನೆಗೆ ಬರುವ ವಿಚಾರ ತಿಳಿದು ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದೆ ಎಂದರು.
ಸಿಎಂ ಅವರು ಕುಟುಂಬ ಸಮೇತವಾಗಿ ಬರುವ ಪ್ಲಾನ್ ಇತ್ತು. ಕಳೆದ ರಾತ್ರಿಯೇ ಅವರಿಗೆ ಕರೆ ಮಾಡಿ ಆಹ್ವಾನಿಸಿದ್ದೆ. ಆದರೆ, ಅನಿವಾರ್ಯ ಕಾರಣದಿಂದ ಅವರೊಬ್ಬರೇ ಬಂದಿದ್ದಾರೆ. ಮನೆಯಲ್ಲಿ ಕೂತು ಮಾತನಾಡಿ ದ್ದೇವೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ, ವ್ಯಾಪಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನು ಹಾಗೂ ನನ್ನ ಪತ್ನಿ ಎಲ್ಲರೂ ಕುಳಿತು ಔಪಚಾರಿಕ ಮಾತುಕತೆ ಮಾಡಿದ್ದೇವೆ ಅಷ್ಟೇ ಎಂದರು.
ನನ್ನನ್ನು ಮಂತ್ರಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಆದರೆ, ಅದರ ಬಗ್ಗೆ ಇಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು.