ಮರೇಗುದ್ದಿ, ಹುಬಳಿಕರ ಕವನಸಂಕಲನಗಳ ಲೋಕಾರ್ಪಣೆ
ಹುಬ್ಬಳ್ಳಿ : ನಗರದ ಅಕ್ಷಯ ಕಾಲೊನಿಯ ಐ.ಬಿ.ಎಂ.ಆರ್. ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಹಮ್ಮಿಕೊಂಡಿದ್ದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವೆಂಕಟೇಶ ಕೃ.ಮರೇಗುದ್ದಿ ಅವರ ’ಕನ್ನಡಮ್ಮನೆ ನಮ್ಮನೆ ದೇವರು’ ಹಾಗೂ ಸುನೀತಾ ಹುಬಳಿಕರ ಅವರ, ’ಕನ್ನಡ ಕವನ ದೀಪ’ ಕವನ ಸಂಕಲನಗಳು ಲೋಕಾರ್ಪಣೆಗೊಂಡವು.
ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಗಣಪತಿ ಗಂಗೊಳ್ಳಿ ಕನ್ನಡದ ಅಸ್ಮಿತೆ ಉಳಿಯಬೇಕಾದರೆ ಶಿಕ್ಷಣದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಎಲ್ಲರಲ್ಲೂ ಕನ್ನಡತನ ಜಾಗೃತವಾಗಬೇಕು. ಪ್ರತಿಯೊಬ್ಬರೂ ಕನ್ನಡತನವನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು.
ಕಳೆದ ಮೂರು ನಾಲ್ಕು ದಶಕಗಳಿಂದ ಕನ್ನಡಕ್ಕಾಗಿ ಹಗಲಿರುಳು ದುಡಿಯುತ್ತ ಮನೆಯನ್ನೇ ಕನ್ನಡಮ್ಮನ ದೇವಾಲಯವಾಗಿಸಿರುವ ಮರೇಗುದ್ದಿಯವರ ಕವನಗಳು ಹೃದಯದ ಪಾತ್ರೆಯಲ್ಲಿ ಲೇಖನಿಯನ್ನು ಅದ್ದಿ ಬರೆದದ್ದು ಹಾಗೂ ಹುಬಳಿಕರ ಅವರು ಅವಿಭಕ್ತ ಕುಟುಂಬದ ಮಹಿಳೆಯಾಗಿ ಬದುಕಿನ ಎಲ್ಲ ಸದ್ವಿಚಾರಗಳನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆಂದರು.
’ಕನ್ನಡಮ್ಮನೆ ನಮ್ಮನೆ ದೇವರು’ ಕೃತಿ ಕುರಿತು ಮಾತನಾಡಿದ ಸಾಹಿತಿ ಚೆನ್ನಪ್ಪ ಅಂಗಡಿ, ’ಸಮಕಾಲೀನ ತಲ್ಲಣಗಳು, ಮಾನವೀಯ ಮೌಲ್ಯಗಳು ಹಾಗೂ ಕನ್ನಡದ ಅಸ್ಮಿತೆಯನ್ನು ಮರೇಗುದ್ದಿ ಅವರ ಕೃತಿ ಹೊಂದಿದೆ. ಜೊತೆಗೆ ಮೌಲಿಕ ಗೇಯಗೀತೆಗಳನ್ನು ಒಳಗೊಂಡಿದೆ’ ಎಂದು ಅಭಿಪ್ರಾಯಪಟ್ಟರು.
’ಕನ್ನಡ ಕವನ ದೀಪ’ ಕುರಿತು ಮಾತನಾಡಿದ ಸಾಹಿತಿ ಮಹಾಂತಪ್ಪ ನಂದೂರ, ’ಸತತ ಅಧ್ಯಯನ, ವೈಚಾರಿಕತೆ, ಸೂಕ್ಷ್ಮಗ್ರಾಹಿತ್ವ ಹಾಗೂ ಸಂವೇದನಾತ್ಮಕ ಗುಣಗಳು ಇದ್ದರೆ ಅತ್ಯುತ್ತಮ ಕವಿತೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ಸುನೀತಾ ಅವರ ಕವನಗಳು ಉತ್ತಮ ಸಾಹಿತ್ಯಾಭಿವ್ಯಕ್ತಿಗೆ ಹಿಡಿದ ಕನ್ನಡಿಯಾಗಿದೆ’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷ ಪರಿಷತ್ತಿನ ಯೋಜನೆಗಳನ್ನು ವಿವರಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ಎಸ್. ಕೌಜಲಗಿ ಪ್ರಸಕ್ತ ಕನ್ನಡದ ಸ್ಥಿತಿಗತಿ ಬಿಚ್ಚಿಟ್ಟರೆ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ, ಕನ್ನಡ ಕಾಯುವ ಕಾರ್ಯಕ್ಕೆ ಸರಕಾರ ನೂತನ ವಿಧೇಯಕ ತರುತ್ತಿದೆ ಎಂದರು.ಕೃತಿಕಾರರಾದ ವೆಂಕಟೇಶ ಕೃ. ಮರೇಗುದ್ದಿ ಹಾಗೂ ಸುನೀತಾ ಹುಬಳಿಕರ ಮನದಾಳದ ಮಾತನಾಡಿದರು.
ಕಸಾಪ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷರಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಚಲನಶೀಲತೆ ತಂದುಕೊಟ್ಟಿರುವ ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು.ಪದ್ಮಜಾ ಉಮರ್ಜಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ವಿರುಪಾಕ್ಷ ಕಟ್ಟಿಮನಿ ವಂದಿಸಿದರು.
ಗ್ರಂಥಪಾಲಕ ಡಾ.ಬಿ.ಎಸ್. ಮಾಳವಾಡ, ಕವಿಗಳಾದ ಸಿ.ಎಂ. ಚೆನ್ನಬಸಪ್ಪ, ಎಸ್.ಆರ್. ಆಶಿ, ಪ್ರಕಾಶ ಕಡಮೆ, ಜಯಶ್ರೀ ಬೇವೂರ, ಶಿಕ್ಷಕ ಅಶೋಕ ಸನ್ನಿ, ರವಿ ಸಾಬಣ್ಣವರ, ತಿಪ್ಪಣ್ಣ ನರಗುಂದ ಸೇರಿದಂತೆ ಅನೇಕರಿದ್ದರು.