ಧಾರವಾಡ : ಅತೀವೃಷ್ಠಿಯಿಂದ ಹಾನಿಗೊಳಗಾದ ಬೆಳೆ, ಮನೆಗಳಿಗೆ ಪರಿಹಾರ, ಬೆಳೆ ವಿಮೆ ವಿತರಣೆಯಲ್ಲಿ ವಿಳಂಬ ಹಾಗೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಧಾರವಾಡ- 71 ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಧಾರವಾಡ ಗ್ರಾಮೀಣ ಭಾಗದಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ಹಾನಿಯಾಗಿದೆ. ಕೃಷಿ ಇಲಾಖೆ ಅಂದಾಜಿನAತೆ 21.598 ಹೆಕ್ಟೇರ್ ಭೂಮಿಯಲ್ಲಿನ ಹೆಸರು, ಉದ್ದು, ಶೇಂಗಾ ಬೆಳೆಗಳು ನಾಶವಾಗಿದೆ. 106.74 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಿದೆ. ತೋಟಗಾರಿಕೆ ಇಲಾಖೆ ಸಮೀಕ್ಷೆಯಲ್ಲಿ 138.38 ಹೆಕ್ಟೇರ್ ಸೋಯಾ ಬೆಳೆ ಹಾನಿಯಾಗಿದ್ದು, 1.52 ಕೋಟಿ ಹಾನಿ ಅಂದಾಜಿಸಲಾಗಿದೆ.
ಇದು ಜುಲೈ 28 ರಿಂದ ಆಗಷ್ಟ್ 5 ವರೆಗೆ ನಡೆಸಿದ ಸಮೀಕ್ಷೆ ಮಾಹಿತಿ ಆದರೆ, ಇಲ್ಲಿಯವರೆಗೆ ಜಿಲ್ಲೆಯಲ್ಲಿ 18.538 ರೈತರಿಗೆ 34.53 ಕೋಟಿ ಪರಿಹಾರ ನೀಡಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ,ಕ್ಷೇತ್ರದಲ್ಲಿ ಇಲ್ಲಿಯವರೆಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ.
ಅದರಲ್ಲೂ ಗರಗ ಹೋಬಳಿ, ಧಾರವಾಡ ಹೋಬಳಿಯ ಹಲವು ಗ್ರಾಮಗಳಲ್ಲಿ ಬೆಳೆಹಾನಿ ಅನುಭವಿಸಿದ ರೈತರಿಗೆ ನೈಯಾಪೈಸೆ ಪರಿಹಾರ ಸಿಕ್ಕಿಲ್ಲ. ಅಮ್ಮಿನಭಾವಿ ಹೋಬಳಿಯಲ್ಲಿ ಕೆಲವು ಬೆರಳೆಣಿಕೆಯಷ್ಟು ರೈತರಿಗೆ ( ಹೆಸರು ಬೆಳೆ ಬೆಳೆದವರಿಗೆ ಮಾತ್ರ) ಅಲ್ಪಸ್ವಲ್ಪ ಪರಿಹಾರ ಸಿಕ್ಕಿದೆ. ಬೆಳೆ ಹಾನಿ ಸಮೀಕ್ಷೆಯಲ್ಲಿ ಸಹ ಲೋಪವಾಗಿದೆ.
ಪರಿಹಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಎಲ್ಲ ರೈತರಿಗೆ ಪರಿಹಾರ ನೀಡುವುದನ್ನು ಬಿಟ್ಟು, ಪಕ್ಷ ರಾಜಕಾರಣ ಮಾಡಲಾಗುತ್ತಿದೆ.
ತಾಲ್ಲೂಕಿನಲ್ಲಿ ನೂರಾರು ಮನೆಗಳು ಬಿದ್ದಿದ್ದು,ಜನ ಸೂರಿಲ್ಲದೇ ಪರದಾಡುತ್ತಿದ್ದಾರೆ. ಆದರೆ, ಸಮೀಕ್ಷೆಯೇ ಸರಿಯಾಗಿ ನಡೆದಿಲ್ಲ ಪರಿಹಾರವೂ ಅರ್ಹರಿಗೆ ಸಿಗುತ್ತಿಲ್ಲ.
ಅಧಿಕಾರಿಗಳು ಬಿಜೆಪಿ ಮುಖಂಡರ ಕಾಟಕ್ಕೆ ಸಮೀಕ್ಷೆಗೆ ಹೋಗುತ್ತಿಲ್ಲ. ಹೀಗಾಗಿ ನಿಜವಾದ ಬಡವರು ಪರಿಹಾರದಿಂದ ವಂಚಿತರಾಗಿದ್ದು, ಇಡೀ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಿ ಅರ್ಹರಿಗೆ ಪರಿಹಾರ ನೀಡಬೇಕಿದೆ ಎಂದು ಆಗ್ರಹಿಸಿದರು..
ಶಾಸಕರು ಸಂಕಲ್ಪ ಯಾತ್ರೆ ಹೆಸರಲ್ಲಿ ಜನರನ್ನು ವಂಚಿಸುವ ಬದಲು ಬೆಳೆಹಾನಿ, ಮನೆ ಪರಿಹಾರ ನೀಡಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಲಿ ಎಂದು ಅಗ್ರಹಿಸಿ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ, ಪಾಲಿಕೆ ಸದಸ್ಯರಾದ ಬಸವರಾಜ ಕಮತಿ, ದೀಪಾ ನೀರಲಕಟ್ಟಿ, ಸೂರವ್ವ ಪಾಟೀಲ, ಮುಖಂಡರಾದ ಸಿದ್ದಣ್ಣ ಪ್ಯಾಟಿ, ಮಡಿವಾಳಪ್ಪ ಉಳವಣ್ಣವರ, ಮಲ್ಲನಗೌಡ ಖಾನಗೌಡ್ರ, ರೇಣುಕಾ ಕಳ್ಳಮನಿ, ಗೌರಿ ಬಲ್ಲೋಟಗಿ, ರಮೇಶ ತಳಗೇರಿ, ಭೀಮಪ್ಪ ಕಾಸಾಯಿ, ಪ್ರದೀಪ ಪಾಟೀಲ, ಪಾರಿಶ್ವನಾಥ ಪತ್ರಾವಳಿ, ಪ್ರಕಾಶ ಭಾವಿಕಟ್ಟಿ, ನಿಜಾಮ ರಾಹಿ, ಅಜ್ಜಪ್ಪ ಗುಲಾಲದವರ, ಆನಂದ ಸಿಂಗನಾಥ, ನವೀನ ಕದಂ, ಬಸವರಾಜ ಮೊರಬ, ರುದ್ರಪ್ಪ ಮೊರಬ, ಗೌರಪ್ಪ ಹುಂಬೇರಿ ಮುಂತಾದವರಿದ್ದರು.