ಧಾರವಾಡ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೂ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿನ ಸನ್ನಿಧಿ ಸಭಾಭವನದಲ್ಲಿ ಶನಿವಾರ ಜರುಗಿದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಹಿಂದುಳಿದ ವರ್ಗಗಳ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದರು.
ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿತು. ಇದು ಹಿಂದುಳಿದ ವರ್ಗಗಳ ಮೇಲೆ ಬಿಜೆಪಿಗಿರುವ ಕಾಳಜಿಗೆ ನಿದರ್ಶನ ವಾಗಿದೆ. ಓಬಿಸಿ ವರ್ಗಕ್ಕೆ ಮೀಸಲಾತಿ ಹೆಚ್ಚಳ, ವೈದ್ಯಕೀಯ ಅಧ್ಯಯನದಲ್ಲಿಯೂ ಮೀಸಲಾತಿ ನಿಗದಿ ಮಾಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಅರವಿಂದ ಬೆಲ್ಲದ ಮಾತನಾಡಿ, ಕಾಂಗ್ರೆಸ್ನ ಯಾವುದೇ ಆಸೆ, ಆಮಿಷ ಗಳಿಗೆ ಮರುಳಾಗದೇ ಪುನಃ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ರಾವ್ ಮುಳೆ, ಮಾಜಿ ಕಾರ್ಪೊರೇಟರ್ ಉದಯ ಲಾಡ್ ಮಾತನಾಡಿದರು.ಮೋರ್ಚಾ ಅಧ್ಯಕ್ಷ ಶಂಕರ ಶೇಳಕೆ, ಮಂಡಲ ಅಧ್ಯಕ್ಷ ಬಸವರಾಜ ಗರಗ, ರಾಜೇಶ್ಚರಿ ಸಾಲಗಟ್ಟಿ, ಕೇದಾರನಾಥ ಚವ್ಹಾಣ, ಸುರೇಶ ಸದರೆ, ಫಕ್ಕೀರಪ್ಪ ಹಡಪದ ಇನ್ನಿತರರರಿದ್ದರು.