ಅಧ್ಯಕ್ಷರಾಗಿ ಗಂಗಾ, ಜಯಲಕ್ಷ್ಮಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಅಣ್ಣಿಗೇರಿ: ನವಲಗುಂದ ಮತಕ್ಷೇತ್ರ ವ್ಯಾಪ್ತಿಯ ಅಣ್ಣಿಗೇರಿ ಪುರಸಭೆ ಕಾಂಗ್ರೆಸ್ ವಶವಾಗಿದ್ದು,
ನೂತನ ಅಧ್ಯಕ್ಷರಾಗಿ 23ನೇ ವಾರ್ಡಿನ ಶ್ರೀಮತಿ ಗಂಗಾ ರಮೇಶ ಕರೆಟನ್ನವರ, ಉಪಾಧ್ಯಕ್ಷರಾಗಿ 3ನೇ ವಾರ್ಡಿನ ಶ್ರೀಮತಿ ಜಯಲಕ್ಷ್ಮಿ ಬಸವರೆಡ್ಡಿ ಜಕರೆಡ್ಡಿಯವರು ಆಯ್ಕೆಯಾಗಿದ್ದಾರೆ .
ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬ ಮಹಿಳಾ ಮೀಸಲಾತಿಗೆ ಮೀಸಲಾಗಿದ್ದು,
ಎರಡೂ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.
ಪುರಸಭೆಯಲ್ಲಿ ಒಟ್ಟೂ 23 ಸದಸ್ಯರುಗಳಿದ್ದು ಅದರಲ್ಲಿ ಕಾಂಗ್ರೆಸ್ 12,ಬಿಜೆಪಿ 5,ಪಕ್ಷೇತರರು 6 ಸದಸ್ಯರು ಆಯ್ಕೆಯಾಗಿದ್ದಾರೆ. ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಗದ್ದುಗೆ ಏರಲು 13 ಸದಸ್ಯರುಗಳು ಬೆಂಬಲ ಬೇಕಾಗಿದ್ದು ಈಗಾಗಲೇ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದಿರುವುದರಿಂದ ಓರ್ವ ಪಕ್ಷೇತರರ ಬೆಂಬಲದ ಅವಶ್ಯಕತೆಯಿತ್ತು.
ಚುನಾವಣಾಧಿಕಾರಿಗಳಾಗಿ ಅಣ್ಣಿಗೇರಿ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಮಂಜುನಾಥ ಅಮಾಸಿ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ,ಠಾಣಾಧಿಕಾರಿ ಎಲ್. ಕೆ .ಜೂಲಕಟ್ಟಿ ಇದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು .
ಅಹೋರಾತ್ರಿ ಧರಣಿ : ನಮಗೆ ಅನ್ಯಾಯವಾಗಿದೆ ನಾವು ಕೋರ್ಟಿಗೆ ಹೊಗಿದ್ದೇವೆ ಹೈಕೋರ್ಟ್ ಆದೇಶ ಬರುವವರಿಗೂ ಪುರಸಭೆ ಅಧ್ಯಕ್ಷ ,ಉಪಾಧ್ಯಕ್ಷ ಚುನಾವಣೆ ನಡೆಸಬಾರದು ಎಂದು ಕಳೆದ ರಾತ್ರಿ ವಿವಿಧ ದಲಿತ ಸಂಘಟನೆಗಳು ತಾಲ್ಲೂಕು ದಂಡಾಧಿಕಾರಿ ಕಚೇರಿ ಎದುರಿಗೆ ನಿನ್ನೆ ರಾತ್ರಿಯಿಂದ ಧರಣಿ ನಡೆಸಿದ್ದವು.ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಪಟ್ಟು ಹಿಡಿದು ಪ್ರತಿಭಟನೆ ಹಿಂಪಡೆದಿಲ್ಲವಾಗಿತ್ತು.
ಮುಖ0ಡರಾದ ಯೋಗೇಶ್ ಚಲವಾದಿ , ಮಂಜುನಾಥ ಹೊನ್ನಣ್ಣವರ ಮುತ್ತು ಬಿಸ್ಟಕನವರ, ಬಿ.ಟಿ.ಶಾಂತರಾಜ್ ಪುರಸಭೆ ಸದಸ್ಯೆ ವೀಣಾ ಸಾತಪ್ಪ ಬೋವಿ, ಶೋಭಾ ಗೊಲ್ಲರ್ ,ಪ್ರವೀಣ ಶಿರಹಟ್ಟಿ ,ನಿಂಗಪ್ಪ ದೇವರಮನಿ ಇನ್ನೂ ಅನೇಕ ದಲಿತ ಮುಖಂಡರುಗಳು ಪಾಲ್ಗೊಂಡಿದ್ದರು.
ಅಣ್ಣಿಗೇರಿ ಪುರಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಕುರುಬ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ದೊರೆತಂತಾಗಿದೆ.