ಹುಬ್ಬಳ್ಳಿ-ಧಾರವಾಡ ಸುದ್ದಿ

ಶೆಟ್ಟರ್‌ಗೆ ಕಾಂಗ್ರೆಸ್ ರತ್ನಗಂಬಳಿ

ಪ್ರಭಾವಿ ಲಿಂಗಾಯತ ಮುಖಂಡ ಕೈ ತೆಕ್ಕೆಗೆ

ಡ್ಯಾಮೇಜ್ ಕಂಟ್ರೋಲ್‌ಗೆ ಸಭೆ

ಕಮಲದ ನಂಟು ಕಳಚಿದ ಅಜಾತಶತ್ರು
ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಕೆ

ಜೋಶಿ ನೇತೃತ್ವದಲ್ಲಿ ಗುಪ್ತ ಸಭೆ

ರಾಹುಲ್ ಸಮ್ಮುಖದಲ್ಲಿ ಸೇರ್ಪಡೆ

ಬೆಂಗಳೂರು: ರಾಜ್ಯ ಬಿಜೆಪಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದ್ದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷ ತೊರೆದ ಬೆನ್ನಲ್ಲೆ ಉತ್ತರ ಕರ್ನಾಟಕ ಭಾಗದಲ್ಲಿ ದಶಕಗಳ ಕಾಲ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಹಿರಿಯ ನಾಯಕರಲ್ಲಿ ಒಬ್ಬರಾದ ಜಗದೀಶ್ ಶೆಟ್ಟರ್ ಕೂಡ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಶಾಸಕ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಖಚಿತವಾಗಿದೆ.


ಈಗಾಗಲೇ ಕಾಂಗ್ರೆಸ್ ಜತೆ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಶಾಮನೂರು ಶಿವಶಂಕರಪ್ಪ ಮೂಲಕ ಡಿ ಕೆ ಶಿವಕುಮಾರ್ ಆಪರೇಷನ್ ಮಾಡಿದ್ದಾರಲ್ಲದೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಉಸ್ತುವಾರಿ ರಣದೀಪ ಸುರ್ಜೇವಾಲಾ ಸಹ ಮಾತನಾಡಿದ್ದಾರೆನ್ನಲಾಗಿದ್ದು ಅಲ್ಲದೇ ಶಾಮನೂರು ಶಿವಶಂಕರಪ್ಪ ಮತ್ತು ಜಗದೀಶ್ ಶೆಟ್ಟರ್ ಬೀಗರಾಗಿದ್ದಾರೆ.


ಜಗದೀಶ್ ಶೆಟ್ಟರ್ ಬಂದರೆ ಸ್ವಾಗತ ಎಂದು ನಿನ್ನೆಯೇ ಸಿದ್ದರಾಮಯ್ಯ ಸಹಿತ ಹಲವಾರು ಮುಖಂಡರು ಹೇಳಿದ್ದರಲ್ಲದೇ ಪ್ರಭಾವಿ ಲಿಂಗಾಯತ ಮುಖಂಡರ ಸೇರ್ಪಡೆಯಿಂದ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ.
ಶೆಟ್ಟರ್‌ರವರನ್ನು ಸೇರ್ಪಡೆಗೆ ಕಾಂಗ್ರೆಸ್ ಎಲ್ಲ ರೀತಿಯ ಕಸರತ್ತು ನಡೆಸಿದ್ದು ರತ್ನಗಂಬಳಿಯ ಸ್ವಾಗತಕ್ಕೆ ಮುಂದಾಗಿದ್ದು, ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಕರೆದೊಯ್ದು ರಾಹುಲ್ ಗಾಂಧಿಯವರ ಸಮ್ಮುಖದಲ್ಲೇ ಸೇರ್ಪಡೆಯಾಗುವರೆಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರವರನ್ನು ಕೆಳಗಿಳಿಸಿದಾಗಲೇ ಬಿಜೆಪಿಯ ಮತ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಚುನಾವಣೆಯ ಹೊಸ್ತಿಲಲ್ಲಿ ಶೆಟ್ಟರ್, ಸವದಿಯಂತಹ ನಾಯಕರ ನಿರ್ಗಮನ ಲಿಂಗಾಯತರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತುಗಳಿಗೆ ಪುಷ್ಠಿ ನೀಡುವಂತಾಗಿದೆ.

ಜೋಶಿ ನೇತೃತ್ವದಲ್ಲಿ ಗುಪ್ತ ಸಭೆ

ಹುಬ್ಬಳ್ಳಿ : ಶೆಟ್ಟರ್ ರಾಜೀನಾಮೆ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಗೋಕಲ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಗುಪ್ತ ಸಭೆ ನಡೆದಿದೆ.
ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯುತ್ತಿದ್ದು,


ಗೌಪ್ಯಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ್, ಪಾಲಿಕೆ ಉಪ ಮೇಯರ್ ಉಮಾ ಮುಕುಂದ, ಶಿವು ಮೆಣಸಿನಕಾಯಿ, ತಿಪ್ಪಣ್ಣ ಮಜ್ಜಗಿ, ರೂಪಾ ಶೆಟ್ಟಿ, ವೀರಣ್ಣ ಸವಡಿ, ಸಂತೋಷ ಚವ್ಹಾಣ ಸೇರಿದಂತೆ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದಾರೆ.

ರಾಹುಲ್ ಸಮ್ಮುಖದಲ್ಲಿ ಸೇರ್ಪಡೆ

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗುವುದು ನಿಶ್ಚಿತವಾಗಿದ್ದು ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಅವರು ಬೆಂಗಳೂರಿಗೆ ತೆರಳಿದ್ದಾರೆ.
ಲಿಂಗಾಯತ ಸಮುದಾಯದ ಪ್ರಬಲ ನಾಯಕ ಶೆಟ್ಟರ್ ಸ್ವಾಗತಕ್ಕೆ ಕಾಂಗ್ರೆಸ್ ವೇದಿಕೆ ಸಿದ್ದಪಡಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶೇಷ ವಿಮಾನ ಕಳುಹಿಸಿದ್ದು, ಮಧ್ಯಾಹ್ನದ ನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಳೆದೆರಡು ವರ್ಷಗಳಿಂದ ಸೆಂಟ್ರಲ್ ಕ್ಷೇತ್ರದ ಆಕಾಂಕ್ಷಿಯಾಗಿ ರಚನಾತ್ಮಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜವಾಬ್ದಾರಿ ನೀಡಿದ್ದಾರೆನ್ನಲಾಗಿದೆ.
ರಾಹುಲ್ ಗಾಂಧಿಯವರ ಕೋಲಾರ ಸಭೆಯಲ್ಲಿ ಅಥವಾ ಬೆಂಗಳೂರಿನ ಸಭೆಯಲ್ಲಿ ಶೆಟ್ಟರ್ ಕೈ ಹಿಡಿಯುವುದು ಖಚಿತವಾಗಿದೆ.
ಬೆಳಗಾವಿಯಿಂದ ಲಕ್ಷ್ಮಣ ಸವದಿ ಅವರನ್ನು ಬೆಂಗಳೂರಿಗೆ ಕರೆತರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಶೇಷ ವಿಮಾನ ಬುಕ್ ಮಾಡಿದ್ದರು.

ಡ್ಯಾಮೇಜ್ ಕಂಟ್ರೋಲ್‌ಗೆ ಸಭೆ

ಹುಬ್ಬಳ್ಳಿ : ಪ್ರಭಾವಿ ಮುಖಂಡ ಜಗದೀಶ್ ಶೆಟ್ಟರ್‌ರವರು ಪಕ್ಷ ಬಿಡುವುದು ಖಚಿತವಾಗುತ್ತಿದ್ದಂತೆಯೇ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದರ್ಶನಗರದ ನಿವಾಸದಲ್ಲಿ ಪ್ರಮುಖ ನಾಯಕರುಗಳ ಜತೆ ಸಭೆ ನಡೆಸಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಈ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್,ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರುಗಳು ಭಾಗಿಯಾಗಿದ್ದಾರೆ.
ಅಲ್ಲದೇ ನಿನ್ನೆ ಸ್ವತಃ ಕೇಂದ್ರ ಸಚಿವರು ಶೆಟ್ಟರ್ ಬೆಂಬಲಿಸಿ ರಾಜೀನಾಮೆಗೆ ಮುಂದಾಗಿದ್ದ ಪಾಲಿಕೆ ಸದಸ್ಯರಿಗೆ ಹಾಗೂ ಪ್ರಮುಖ ಪದಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಪರಿಣಾಮ ಶೆಟ್ಟರ್ ಮನೆಯತ್ತ ಹಾಯ್ದಿರಲಿಲ್ಲ.

ಕಮಲದ ನಂಟು ಕಳಚಿದ ಅಜಾತಶತ್ರು
ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಕೆ

ಶಿರಸಿ: ರಾಜ್ಯ ಬಿಜೆಪಿ ನಾಯಕರ ರಾಜೀನಾಮೆ ಪರ್ವ ಮುಂದುವರೆದಿದ್ದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರು ಶಿರಸಿಯಲ್ಲಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದ್ದಾರೆ.


ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್ ಸಚಿವರಾಗಿ, ವಿಧಾನಸಭೆ ಸ್ಪೀಕರ್ ಆಗಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಬಿಜೆಪಿಯ ಹಲವು ನಾಯಕರು ಶನಿವಾರ ರಾತ್ರಿ ಶೆಟ್ಟರ್ ಅವರನ್ನು ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಿದರೂ ಸಂಧಾನ ವಿಫಲಗೊಂಡ ನಂತರ ಶೆಟ್ಟರ್ ತಡರಾತ್ರಿ ಪಕ್ಷ ತೊರೆವ ನಿರ್ಧಾರ ಪ್ರಕಟಿಸಿದ್ದರು.

administrator

Related Articles

Leave a Reply

Your email address will not be published. Required fields are marked *