ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲ ಕ್ಷೇತ್ರಗಳ ಟಿಕೆಟ್ ಹಂಚಿಕೆಯನ್ನು ಬಹುತೇಕ ಎಲ್ಲ ಪಕ್ಷಗಳು ಪೂರ್ಣಗೊಳಿಸಿವೆ.
14 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಯೂ ಆಗಿದೆ. ಉಳಿದ 14 ನಾಮಪತ್ರ ಸಲ್ಲಿಕೆ ಬಾಕಿ ಇದೆ.
ಕಳೆದ ಬಾರಿ 25 ಸ್ಥಾನ (ಈಗಿನ ಹೊಂದಾಣಿಕೆ ಲೆಕ್ಕ ಹಾಕಿದರೆ 27) ಗೆದ್ದುಬಿಗಿದ್ದ ಕಮಲ ಪಾಳಯಕ್ಕೆ ಚುನಾವಣೆಗೂ ಮುನ್ನವೇ ಶಕ್ತಿ ಉಡುಗಿದೆ ಎಂದೇ ಹೇಳಬಹುದಾಗಿದೆ.
ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಗೆಲ್ಲುವ ಕುದುರೆಗಳನ್ನು, ಸ್ವಲ್ಪ ಪ್ರಯತ್ನ ಹೆಚ್ಚಿಸಿದರೆ ಗೆಲ್ಲುವುದು ಗ್ಯಾರಂಟಿ ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನದ್ದಾಗಿದೆ. ಆದರೆ ತೆನೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಳೆದ ಬಾರಿಯ ಸಮೀಪವಾದರೂ ಸೀಟ್ ಗಳಿಸೋಣ ಎಂಬ ಬಿಜೆಪಿ ಲೆಕ್ಕಾಚಾರ ಆರಂಭದಲ್ಲೇ ತಲೆ ಕೆಳಗಾಗಿದೆ. ಹಿನ್ನೆಲೆ, ಮುನ್ನೆಲೆ, ಪಕ್ಷದೊಳಗಿನ ಚಟುವಟಿಕೆ, ಕ್ಷೇತ್ರದಲ್ಲಿನ ಅಭಿವೃದ್ಧಿ, ಪಕ್ಷದ ಕಾರ್ಯಕರ್ತರೊಂದಿಗಿನ ಸಂಪರ್ಕ, ಸಂಬಂಧ ಎಲ್ಲವನ್ನೂ ಅಳೆದು ತೂಗಿ ಟಿಕೆಟ್ ಘೋಷಿಸಿದ್ದಾಗಿ ಕಮಲ ಪಾಳಯ ವರಿಷ್ಠರು ಹೇಳುತ್ತಿದ್ದರೂ ಅವರ ಲೆಕ್ಕ ಪಕ್ಕಾ ಅಲ್ಲ ಎಂದು ಮೆಲ್ನೋಟಕ್ಕೆ ಅನಿಸುವಂತಿದೆ. ಒಂದು ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಮುಗಿದಿದ್ದರೂ ಬಂಡಾಯದ ಬೇಗುದಿ, ಒಳ ಹೊಡೆತ ನೀಡುವವರನ್ನು ಪೂರ್ಣ ಪ್ರಮಾಣದಲ್ಲಿ ತಣ್ಣಗಾಗಿಸಲು ಆಗುತ್ತಿಲ್ಲ. ಕೇಂದ್ರದ ರಿಂಗ್ ಮಾಸ್ಟರ್ ಮಾತಿಗೂ ಡೋಂಟ್ ಕೇರ್ ಎನ್ನುವ ಹಂತಕ್ಕೆ ಭಿನ್ನಮತ ತಲುಪಿದೆ.
ಆದರೆ ಕಾಂಗ್ರೆಸ್‌ಗೆ ಎರಡ್ಮೂರು ಕ್ಷೇತ್ರ ಹೊರತುಪಡಿಸಿದರೆ ಉಳಿದೆಡೆ ಬಂಡಾಯ, ವಿರೋಧದ ಬಿಸಿ ಇಲ್ಲ. ಮಂತ್ರಿಗಳ ಮಕ್ಕಳಿಗೆ ಕಾಂಗ್ರೆಸ್ ಸಲೀಸಾಗಿ ಟಿಕೆಟ್ ನೀಡಿ ಗೆಲುವಿನ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಪಕ್ಕಾ ಪ್ಲ್ಯಾನ್ ಹಾಕಿದೆ. ಅದರೊಂದಿಗೆ ಬಿಜೆಪಿಗೆ ಒಳ ಏಟು ಕೊಡುವವರನ್ನು ವಿಧಾನಸಭೆ ಚುನಾವಣೆಯಲ್ಲಿ ತೆಕ್ಕೆಗೆ ತೆಗೆದುಕೊಂಡು ಕೈ ಮೇಲು ಮಾಡಿಕೊಂಡಂತೆ ಇಲ್ಲಿಯೂ ಹಾಗೆ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಆದರೆ ಬಿಜೆಪಿ ಮಾಡಿದ ತಪ್ಪುಗಳನ್ನು ಮುಂದುವರಿಸುತ್ತಾ, ಜನ ನಮ್ಮನ್ನು ಮೋದಿ ಮುಖ ನೋಡಿ ಮತ ನೀಡುತ್ತಾರೆ ಎಂದು ಬಿಗುವುದನ್ನು ಬಿಟ್ಟಿಲ್ಲ. ಅಧಿಕಾರದ ಕುರ್ಚಿ ಬಿಡಲು ರೆಡಿ ಆದವರೂ ಕೂಡಾ ಮತ್ತೆ ಅಧಿಕಾರ ಪಡೆಯಲು ಟಿಕೆಟ್ ಫೈಟ್‌ನಲ್ಲಿ ಗೆದ್ದು ಮೀಸೆ ಮೇಲೆ ಕೈ ಎಳೆದರೆ, ಟಿಕೆಟ್ ಸಿಗದವರು ಹೇಗೆ ಗೆಲ್ಲುತ್ತಾನೆ ನೋಡೋಣ ಎಂಬಂತೆ ಕಣ್ಣ ಸನ್ನೆಯಿಂದಲೇ ಮಾತಾಡುತ್ತಿದ್ದಾರೆ.
ತಂದೆ ಮಕ್ಕಳ ಆಟಕ್ಕೆ ಬ್ರೇಕ್ ಹಾಕೋಣವೆಂದು ಕೆ.ಎಸ್. ಈಶ್ವರಪ್ಪ ಬಹಿರಂಗ ಸಡ್ಡು ಹೊಡೆದಿದ್ದರೆ, ಅವರೆಷ್ಟು ವೋಟ್ ಪಡೆಯುತ್ತಾರೆ ಎಂಬ ಉದಾಸೀನತೆ ಹಾಗೂ ಜನ ಬೆಂಬಲವಿಲ್ಲ ಎಂಬ ಲೆಕ್ಕಾಚಾರದ ಜೊತೆಗೆ ಮೇಲಿನವರು ಕಂಟ್ರೋಲ್ ಮಾಡುತ್ತಾರೆ ಎಂಬ ಭಾವನೆ ತಂದೆ ಮಕ್ಕಳದ್ದಾಗಿದೆ.
ಉತ್ತರ ಕನ್ನಡದಲ್ಲಿ ಬಿಜೆಪಿ ಗೆಲುವು ಹಾಗೂ ಅನಂತಕುಮಾರ್ ಹೆಗಡೆಗೆ ಟಿಕೆಟ್ ಗ್ಯಾರಂಟಿ ಅನ್ನುವುದು ಕೊನೆಯ ಹಂತದಲ್ಲಿ ಬದಲಾಯಿತು. ಈಗ ಆ ಹಿಂದೂ ಹುಲಿ ಗವಿ ಸೇರಿದಂತೆ ಇದ್ದದ್ದು, ಬಿಜೆಪಿ ಗೆಲುವಿನ ಓಟಕ್ಕೆ ತೊಡಕಾಗುತ್ತಿದೆ. ಪಕ್ಷದ ವರಿಷ್ಠರಿಗೂ ಇದು ತಲೆನೋವಾಗಿದೆ.
ಯಾರ ಸಂಪರ್ಕಕ್ಕೂ ಸಿಗದೆ ಇರುವುದು ಅವರ ನಡೆ ಬಗ್ಗೆ ಕುತೂಹಲ ಹಾಗೂ ಅವ್ಯಕ್ತ ಭಯ ಕಾಡುತ್ತಿದೆ. ಆದರೆ ಚಾಣಕ್ಯನ ಮಾತಿಗೂ ಜಪ್ಪೆನ್ನದ ಅನಂತ, ಪಕ್ಷ ನನ್ನನ್ನು ಬಿಟ್ಟ ಮೇಲೆ ನನ್ನ ಚಿಂತೆ ತಮಗೆ ಬೇಡ. ನಾನು ವೈಯಕ್ತಿಕ ಕೆಲಸದಲ್ಲಿ ಬ್ಯುಜಿಯಾಗಿದ್ದಾಗಿ ಹೇಳಿದ್ದಲ್ಲದೇ, ನಾನು ರಾಷ್ಟ್ರಭಕ್ತ ಎಂದು ಹೇಳುತ್ತಾ ಪಕ್ಷದ ವಿರೋಧಿ ಚಟುವಟಿಕೆ ಮಾಡಲ್ಲ. ಯಾರೊಂದಿಗೆ ಇರಲ್ಲ ಎಂಬುದನ್ನು ಹೇಳಿದ್ದನ್ನು ನೋಡಿದರೆ, ನಾವೆಲ್ಲಾ ಸುಮ್ಮನಿರೋಣ ಎಂಬ ಸಂದೇಶವನ್ನು ತಮ್ಮ ಬೆಂಬಲಿಗರಿಗೆ ಸೂಕ್ಷ್ಮವಾಗಿ ಹೇಳಿದಂತೆ ಮಾಡಿದ್ದಾರೆ. ಇದು ಸದ್ಯದ ಚಿತ್ರಣ, ಪಿಕ್ಚರ್ ಅಬಿ ಬಾಕಿ ಹೈ. ಕಾದು ನೋಡೋಣ