ಹುಬ್ಬಳ್ಳಿ-ಧಾರವಾಡ ಸುದ್ದಿ

ಮುಂದುವರಿದ ಯಡವಟ್ಟು: ಬಿಜೆಪಿ ಸದಸ್ಯರಿಂದಲೆ ಉಲ್ಟಾ ಧ್ವಜ ವಿತರಣೆ

ಹುಬ್ಬಳ್ಳಿ : ರಾಜ್ಯ ಸರ್ಕಾರದ ಸೂಚನೆಯಂತೆ ’ಹರ್ ಘರ್ ತಿರಂಗಾ’ ಅಭಿಯಾನಕ್ಕಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈ ಬಾರಿ 1 ಲಕ್ಷ ತ್ರಿವರ್ಣ ಧ್ವಜ ಖರೀದಿಸಿದ್ದು, ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಧ್ವಜಗಳು ದೋಷಪೂರಿತವಾಗಿದೆಯೆನ್ನಲಾಗಿದೆ. ಬೇಕಾಬಿಟ್ಟಿಯಾಗಿ ಧ್ವಜ ತಯಾರಿಸಲಾಗಿದ್ದು, ಕೇಸರಿ, ಬಿಳಿ, ಹಸಿರು ಬಣ್ಣಗಳ ಅಳತೆ ಹೆಚ್ಚು ಕಡಿಮೆಯಾಗಿದೆ. ಉದ್ದ ಮತ್ತು ಅಗಲ ನಿಯಮಾನುಸಾರ ಇಲ್ಲ. ಅಶೋಕ ಚಕ್ರ ಮಧ್ಯದಲ್ಲಿ ಇರದೇ ಎಡಕ್ಕೆ ಹಾಗೂ ಬಲಕ್ಕೆ ಮುದ್ರಿಸಲಾಗಿದೆ. ಅನೇಕ ಧ್ವಜಗಳ ಹೊಲಿಗೆ ಸಡಿಲಗೊಂಡಿವೆ. ಮತ್ತೆ ಕೆಲ ಧ್ವಜಗಳು ಹರಿದವುಗಳು ಬಂದಿವೆ.


ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವರೆಂದು ಮನೆ ಮನೆಗೆ ಅನೇಕ ಪಾಲಿಕೆ ಸದಸ್ಯರು ರಾಷ್ಟ್ರಧ್ವಜಗಳನ್ನು ಹಂಚುತ್ತಿದ್ದು ೪೯ನೇ ವಾರ್ಡಿನ ಕಾರ್ಪೋರೇಟರ್‌ವೀಣಾ ಭರದ್ವಾಡ ದಂಪತಿಗಳು ಉಲ್ಟಾ ಧ್ವಜವನ್ನು ವಿತರಿಸುತ್ತಿರುವ ಚಿತ್ರ ವೈರಲ್ ಆಗಿದೆ.
ಪಾಲಿಕೆ ಕಚೇರಿಯಲ್ಲಿ ರಾಷ್ಟ್ರ ಧ್ವಜಗಳನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗಿದೆಯಲ್ಲದೇ ದೋಷಪೂರಿತ ಧ್ವಜಗಳನ್ನೇ ಅನೇಕರು ವಿತರಿಸುತ್ತಿದ್ದಾರೆ.


ಶೇ. 70ಕ್ಕಿಂತ ಹೆಚ್ಚು ದೋಷಪೂರಿತ ಧ್ವಜಗಳು ವಲಯ 9ರ ಕೆಲ ವಾರ್ಡ್‌ಗಳಲ್ಲಿ ಕಂಡುಬಂದಿವೆ. ಖರೀದಿಸಿದ ಧ್ವಜಗಳು ಸರಿಯಾಗಿ ಇವೆಯೇ ಎಂಬುದನ್ನೂ ಗಮನಿಸಿದೇ ವಲಯಾಧಿಕಾರಿಗಳು ಪಾಲಿಕೆ ಸದಸ್ಯರಿಗೆ ಹಂಚಿಕೆ ಮಾಡಿದ್ದಾರೆನ್ನಲಾಗಿದೆ. ರಾಷ್ಟ್ರಧ್ವಜದ ಘನತೆ, ಗೌರವ ಕಾಪಾಡಿಕೊಳ್ಳುವ ಹೊಣೆಗಾರಿಕೆ ಪಾಲಿಕೆ ,ಪಾಲಿಕೆ ಸದಸ್ಯರು ಅಲ್ಲದೇ ಸಾರ್ವಜನಿಕರಿಗೂ ಇದೆ.


ರಾಷ್ಟ್ರ ಧ್ವಜದ ಬಗ್ಗೆ ಕನಿಷ್ಠ ಗೌರವವೂ ಇಲ್ಲದ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಂದ ತ್ರಿವರ್ಣ ಧ್ವಜಕ್ಕೆ ಅವಮಾನವಾಗುತ್ತಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಶಾಜಮಾನ್ ಮುಜಾಹಿದ್ ಸಹಿತ ಸೇರಿದಂತೆ ಅನೇಕರು ಆಗ್ರಹಿಸಿದ್ದಾರಲ್ಲದೇ ಈಗಲಾದರೂ ತಪ್ಪು ತಿದ್ದಿಕೊಂಡು ಧ್ವಜ ನಿಯಮದಂತೆ ನಿರ್ಮಿಸಿದ ಉತ್ತಮ ದರ್ಜೆಯ ಧ್ವಜಗಳನ್ನು ಮಾತ್ರ ಜನರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *