ಕಾಮಗಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸಾಲದ ಸುಳಿಗೆ ಸಿಲುಕಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ದಿ. 8ರೊಳಗೆ ಅವುಗಳನ್ನು ಬಗೆಹರಿಸ ದಿದ್ದರೆ ಎಲ್ಲ ಕಾಮಗಾರಿಗಳನ್ನು ಬಂದ್ ಮಾಡಿ ಪಾಲಿಕೆ ಆವರಣದಲ್ಲಿ ಬೃಹತ್ ಪ್ರತಿಭಟನೆ ಮತ್ತು ಮುಷ್ಕರ ನಡೆಸುವದು ಅನಿವಾರ್ಯವಾಗುವುದು ಎಂದು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಶರದ ದೊಡ್ಡಮನಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡ ಗುತ್ತಿಗೆದಾರರನ್ನು ಪಾರು ಮಾಡುವ ಹೋರಾಟಕ್ಕೆ ಅಣಿಯಾಗಲು ಗುತ್ತಿಗೆದಾರರ ಸಂಘ ಮೊನ್ನೆ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಠರಾವು ಸ್ವೀಕರಿಸಿದ್ದು, ಈ ಸಮಸ್ಯೆಗಳನ್ನು7 ದಿನಗಳಲ್ಲಿ ಬಗೆಹರಿಸುವಂತೆ ನೋಟಿಸ್ ನೀಡಲಾಗುತ್ತಿದೆ. ಈ ಸಮಯದಲ್ಲಿ ಅವಳಿನಗರದ ಜನರಿಗೆ ಉಂಟಾಗುವ ಅನಾನುಕೂಲತೆಗೆ ಸಂಘ ಜವಾಬ್ದಾರಿಯಾಗುವುದಿಲ್ಲ ಎಂದರು.
360 ಕೋಟಿ ಮೊತ್ತದ ಕಾಮಗಾರಿಗಳಿಗೆ ಅಂಗಿಕಾರ ಪತ್ರ ನೀಡಿದೆ. 77ಕೋಟಿ ಮೊತ್ತದ ಕಾಮಗಾರಿ ಕಡತಗಳು ಟೆಂಡರ್ ಮೌಲ್ಯಮಾಪನ ಹಂತದಲ್ಲಿವೆ. ಮತ್ತು ಶೀಘ್ರದಲ್ಲೇ ಕಾರ್ಯಾದೇಶ ನೀಡಲಾಗುವುದು .ಹೀಗಿದ್ದರೂ ಪ್ರತಿ ತಿಂಗಳು ಗುತ್ತಿಗೆದಾರನಿಗೆ ಪಾವತಿಯಾಗುತ್ತಿರುವುದು ಕೇವಲ 2 ಕೋಟಿ ಮಾತ್ರ ಎಂದರು.
360 ಕೋಟಿ ಬೃಹತ್ ಮೊತ್ತ ಕರಗಲು ಪ್ರತಿ ತಿಂಗಳು 2 ಕೋಟಿ ನೀಡಿದಲ್ಲಿ ಸುಮಾರು 15 ವರ್ಷ ಕಾಯಬೇಕಾಗುವುದು. ಇದೆಲ್ಲದರ ಹೊರತಾಗಿ ಪ್ರತಿ ವಾರ್ಡಿಗೆ 50 ಲಕ್ಷದಂತೆ ಅಲ್ಲದೇ ಮೇಯರ್ ಹಾಗೂ ಉಪಮೇಯರ್ ಮತ್ತು ಆಯುಕ್ತರ ವಿಶೇಷ ವಿವೇಚನಾ ನಿಧಿ ಸೇರಿ 50 ಕೋಟಿ ಹೆಚ್ಚುವರಿ ವೆಚ್ಚ ಇವೆಲ್ಲವೂ ಸಹಿತ ಆದಾಯ ಮತ್ತು ಖರ್ಚಿನ ಸಮತೋಲನ ಬಗ್ಗೆ ಪಾಲಿಕೆಗೆ ಅರಿವಿರಲಿಲ್ಲವೇ ಎಂದು ಪ್ರಶ್ನಿಸಿದರು.
ನವನಗರದ ಖುಲ್ಲಾ ಪ್ಲಾಟ್‌ಗಳನ್ನು ಮಾರಾಟ ಮಾಡಿ ಅದರಿಂದ ಬರುವ ೧೫೦ ಕೋಟಿ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗುವುದು ಎಂದು ಆಮಿಷ ತೋರಿಸಿದ್ದು ಕೇವಲ ಭರವಸೆಯಾಗಿ ಉಳಿದಿದೆ.ಸಾಲ ತಂದು ಹಣ ಹಾಕಿದ ನಮ್ಮ ಪರಿಸ್ಥಿತಿ ಬೀದಿಗೆ ಬೀಳುವ ಹಂತ ತಲುಪಿದೆ ಎಂದರು.
ಗೋಷ್ಠಿಯಲ್ಲಿ ಅಧ್ಯಕ್ಷ ವೀರಣ್ಣ ಹಂಚಿನ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಟಿ, ಶಂಕರ ಭೋಜಗಾರ, ಎನ್.ಎನ್.ಕರನಂದಿ, ರಶೀದ ಬೋಲಾಬಾಯಿ, ಪಂಪಣ್ಣ ಅಂಬಿಗೇರ ಇನ್ನಿತರರು ಇದ್ದರು.