ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ: ಆರೋಪ
ಹುಬ್ಬಳ್ಳಿ: ಮಹಾದಾಯಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣವಾಗಿದ್ದು, ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ಮಾಹಿತಿ ಕೊಟ್ಟರೂ ನ್ಯಾಯ ಸಿಗುತ್ತಿಲ್ಲ ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಲಪ್ರಭಾ ಬಲದಂಡೆ ಕಾಲುವೆಯನ್ನು ನವೀಕರಣ ಮಾಡಲು2016-17 ನೇ ಸಾಲಿನಲ್ಲಿ ಟೆಂಡರ್ ಕರೆಯಲಾಗಿತ್ತು. ಅಂದಾಜು ಪತ್ರಿಕೆ, ಡಿಪಿಆರ್‌ಗಳಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದ್ದು, ತುಪ್ಪರಿ ಹಳ್ಳದ ಯೋಜನೆ 312 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದರಲ್ಲೂ ಕೂಡ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ನೀರಾವರಿ ಇಲಾಖೆಯಲ್ಲಿ ನೂರಾರು ಅಧಿಕಾರಿಗಳು ಒಂದೇ ಜಾಗದಲ್ಲಿ 15ರಿಂದ 18ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಭ್ರಷ್ಟಾಚಾರದ ಉಗಮ ಸ್ಥಾನವಾಗಿದೆ ಎಂದು ಆರೋಪಿಸಿದರು.
ಡಾ. ನಂಜುಂಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ಬೆಂಗಳೂರಿನಲ್ಲಿರುವ 9 ಇಲಾಖೆಗಳ ಪೈಕಿ ಕರ್ನಾಟಕ ನೀರಾವರಿ ನಿಗಮ ವ್ಯವಸ್ಥಾಪಕರ ನಿರ್ದೇಶಕರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರ ಮಾಡದೇ ಇರುವುದು. ಭ್ರಷ್ಟಾಚರಕ್ಕೆ ಪುಷ್ಠಿ ನೀಡಿದಂತಾಗಿದೆ ಎಂದರು.
ದಿ. 14ರಂದು ನರಗುಂದದ ರೈತ ವೇದಿಕೆಯಲ್ಲಿ 4 ಜಿಲ್ಲೆ, 11 ತಾಲೂಕಿನ ಸಮನ್ವಯ ಸಮಿತಿ ಸರ್ವ ಸದಸ್ಯರ ಸಭೆ ನಡೆಯಲಿದ್ದು, ಅದರಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ, ರಾಜ್ಯ ವಕ್ತಾರ ಗುರು ರಾಯನಗೌಡರ ಇದ್ದರು.