ಹುಬ್ಬಳ್ಳಿ: ನವನಗರ ಪೊಲೀಸ್ ಠಾಣೆ ಎದುರು ಕಳೆದ ತಿಂಗಳು ಮತಾಂತರಕ್ಕೆ ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲಾದಾಗಲೇ ಡಿಸಿಪಿ ಕೆ.ರಾಮರಾಜನ್ ವರ್ಗಾವಣೆ ನಿಕ್ಕಿ ಎಂಬ ಗುಸು ಗುಸು ಕೊನೆಗೂ ನಿಜವಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಖಡಕ್ ಅಧಿಕಾರಿ ಕೆ.ರಾಮರಾಜನ್ ಅವರನ್ನ ಬೆಂಗಳೂರು ಶಹರ ಕಮಾಂಡ್ ಸೆಂಟರ್ ಗೆ ವರ್ಗಾವಣೆ ದಿ.೧೭ರಂದು ಆದೇಶ ಹೊರಡಿಸಲಾಗಿದೆ.
ನೂತನ ಡಿಸಿಪಿಯಾಗಿ ಹೆಚ್ಚುವರಿ ಹೊಣೆಗಾರಿಕೆಯೊಂದಿಗೆ ಬೆಂಗಳೂರಿನ ಸಿಐಡಿ ಎಎಸ್ ಪಿ ಸಾಹಿಲ್ ಭಾಗ್ಲಾ ಅವರನ್ನು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
ಅವಳಿನಗರದಲ್ಲಿ ತಮ್ಮದೇ ಆದ ರೀತಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡಿದ್ದ ರಾಮರಾಜನ್ ಅಕ್ರಮ ಕುಳಗಳಿಗೆ ಆಯುಕ್ತ ಲಾಬೂರಾಮರಂತೆಯೇ ಬಿಸಿತುಪ್ಪವಾಗಿದ್ದರು.
ಮತಾಂತರ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ನವನಗರ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಡಿಸಿಪಿ ರಾಮರಾಜನ್ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದರೂ ಅವರ ವರ್ತನೆ ಖಂಡಿಸಿ ಆಡಳಿತಾರೂಡ ಬಿಜೆಪಿಯವರೇ ಹರಿಹಾಯ್ದಿದ್ದರಲ್ಲದೇ ’ಸಂಘ’ದವರೂ ಸಹ ಫರ್ಮಾನು ಹೊರಡಿಸಿದ್ದರು ಎನ್ನಲಾಗಿದೆ.
ಬಹುತೇಕ ಬಿಜೆಪಿ ಜನಪ್ರತಿನಿಧಿಗಳು ಸಹ ರಾಮರಾಜನ್ನಂತಹ ಖಡಕ್ ಅಧಿಕಾರಿ ನಮಗೆ ಬೇಡ ಎಂದು ಒಕ್ಕೊರಲಿನಿಂದ ಅವರನ್ನು ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದದ್ದು ಈಗ ಫಲ ನೀಡಿದೆ.
ಮುಖ್ಯಮಂತ್ರಿ ಬೊಮ್ಮಾಯಿ ತವರಿನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಲು ಎಸ್ಪಿ ರ್ಯಾಂಕ್ ಅಧಿಕಾರಿಯೂ ದೊರೆಯದೇ ಡಿಎಸ್ಪಿ ರ್ಯಾಂಕಿಂಗ್ನ ಅಧಿಕಾರಿಗೆ ಹೊಣೆಗಾರಿಕೆ ನೀಡುವಂತ ಪರಿಸ್ಥಿತಿ ಬಂತೇ ಎಂದು ಸಾಮಾನ್ಯರು ಆಡಿಕೊಳ್ಳುವಂತಾಗಿದೆ.