ಹುಬ್ಬಳ್ಳಿಯ ಪಟ್ಟಿಯಲ್ಲಿ ರೂಪಾ, ಮೀನಾಕ್ಷಿ, ಪೂಜಾ, ಸೀಮಾ ರೇಸ್‌ನಲ್ಲಿ
ಧಾರವಾಡ ಲೀಸ್ಟ್‌ನಲ್ಲಿ ಜ್ಯೋತಿ, ಅನಿತಾ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 21ನೆಯ ಅವಧಿಗೆ ಮೇಯರ್ ಉಪ ಮೇಯರ್ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮೂರನೇ ಅವಧಿಗೆ ಅಧಿಕಾರಕ್ಕೇರುವ ಹಾದಿಯಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿಯಲ್ಲಿ ಮೇಯರ್ ಪಟ್ಟಕ್ಕೆ ಸುಮಾರು 10ಕ್ಕೂ ಹೆಚ್ಚು ಸದಸ್ಯರ ಮಧ್ಯೆ ಪೈಪೋಟಿಯಿದ್ದು, ಉಪ ಮೇಯರ್ ಕುರ್ಚಿ ಅಲಂಕರಿಸಲು ಕಸರತ್ತು ಆರಂಭವಾಗಿದೆ.
ಪ್ರತ್ಯೇಕ ಧಾರವಾಡ ಪಾಲಿಕೆ ಹೋರಾಟದ ಹಿನ್ನೆಲೆಯಲ್ಲಿ ಅಲ್ಲದೇ ಕಳೆದ ಎರಡು ಅವಧಿಯಲ್ಲಿ ಎರಡು ಬಾರಿ ಮಾತ್ರ ಪೇಡೆನಗರಿಗೆ ಮೇಯರ್ ಸ್ಥಾನ ದೊರಕಿರುವ ಹಿನ್ನೆಲೆಯಲ್ಲಿ ಈ ಬಾರಿ ಪ್ರಥಮ ಪ್ರಜೆ ಸ್ಥಾನ ಧಾರವಾಡ ವಶವಾಗುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಪಮೇಯರ್ ಪಟ್ಟ ಹುಬ್ಬಳ್ಳಿಗೆ ನಿಶ್ಚಿತ ಎನ್ನಲಾಗುತ್ತದೆ.
ಈ ಬಾರಿಗೆ ಪಾಲಿಕೆಗೆ ಬಿಜೆಪಿಯಿಂದ ಬಲಗಾಲಿಟ್ಟ ಮಹಿಳೆಯರ ಪೈಕಿ ಮಾಜಿ ಮೇಯರ್ ರಾಧಾಬಾಯಿ ಸಫಾರೆ ಬಿಟ್ಟರೆ ಎಲ್ಲರೂ ಹೊಸಬರಾಗಿದ್ದಾರೆ. ಸಫಾರೆ ಮೇಯರ್ ಪಟ್ಟ ಅಲಂಕರಿಸಿದ್ದು ಈಗ ಉಪಮೇಯರ್ ಪಟ್ಟಕ್ಕೇರುವ ಸಾಧ್ಯತೆ ಕಡಿಮೆ. ಒಟ್ಟಿನಲ್ಲಿ ಮೊದಲ ಬಾರಿ ಆಯ್ಕೆಯಾದವರ ಮಧ್ಯೆಯೇ ತುರುಸಿನ ಜಿದ್ದಾಜಿದ್ದಿ ಏರ್ಪಡುವ ಲಕ್ಷಣಗಳು ಇವೆ.
ಉಪ ಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಆಯ್ಕೆಯಾದವರಿಗೆ ಮೊದಲ ಆದ್ಯತೆಯಾಗಿರುವ ಹಿನ್ನೆಲೆಯಲ್ಲಿ 47ನೇ ವಾರ್ಡಿನಲ್ಲಿ ಕಮಲ ಅರಳಿಸಿದ, ಅಲ್ಲದೇ ಮಾಜಿ ಸಿಎಂ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಅವರ ಆತ್ಮೀಯ ವಲಯದಲ್ಲಿರುವ ರೂಪಾ ಶೆಟ್ಟಿ , 57 ವಾರ್ಡಿಂದ ಗೆಲುವು ಸಾಧಿಸಿರುವ ಹಾಲಿ ಹುಡಾ ಸದಸ್ಯೆಯೂ ಆಗಿರುವ ಮೀನಾಕ್ಷಿ ವಂಟಮೂರಿ, ೬೪ರಲ್ಲಿ ವಿಜಯಿಯಾಗಿರುವ ರಾಜ್ಯ ಓಬಿಸಿ ಮುಖಂಡ ಸತೀಶ ಶೇಜವಾಡ್ಕರ್ ಪತ್ನಿ ಪೂಜಾ ಶೇಜವಾಡಕರ, ಇವರುಗಳಲ್ಲದೇ ಒಬಿಸಿ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ಮುಖಂಡ ಸಿದ್ದು ಮೊಗಲಿಶೆಟ್ಟರ್ ಪತ್ನಿ ಸೀಮಾ ಮೊಗಲಿಶೆಟ್ಟರ್ (೩೯)ಅವರ ಹೆಸರು ಪ್ರಭಲವಾಗಿ ಪರಿಗಣನೆಗೆ ಬರುವ ಸಾಧ್ಯತೆಗಳಿವೆ. ಸರಸ್ವತಿ ಧೋಂಗಡಿ(54) ಪ್ರೀತಿ ಖೋಡೆ (66), ವೀಣಾ ಭರದ್ವಾಡ ( 49), ಸುಮಿತ್ರಾ ಗುಂಜಾಳ (72) ಶೀಲಾ ಕಾಟಕರ(73) ಇವರು ಸಹ ಆಯ್ಕೆಯಾದ ಇತರ ಸದಸ್ಯರಾಗಿದ್ದಾರೆ.
ಮೇಯರ್ ಲೆಕ್ಕಾಚಾರ ತಲೆಕೆಳಗಾಗಿ ಹುಬ್ಬಳ್ಳಿಗೆ ದೊರೆತಲ್ಲಿ ಧಾರವಾಡಕ್ಕೆ ಒಲಿಯುವುದು ಗ್ಯಾರಂಟಿಯಾಗಿದ್ದು ಜ್ಯೋತಿ ಪಾಟೀಲ ( 19) ಹಾಗೂ ಅನಿತಾ ಚಳಗೇರಿ ( 1ನೇ ವಾರ್ಡ) ಹೆಸರುಗಳು ಮುಂಚೂಣಿಯಲ್ಲಿ ಇದೆ ಎನ್ನಲಾಗುತ್ತಿದೆ. ರತ್ನಾ ನಾಝರೆ(9) ಹಾಗೂ ನೀಲಮ್ಮ ಅರವಾಳದ ಅವರೂ ಆಯ್ಕೆಯಾದ ಇತರ ಬಿಜೆಪಿ ಸದಸ್ಯರಾಗಿದ್ದಾರೆ.
ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರಿಗಳ ಕೈಯಲ್ಲೇ ಆಡಳಿತವಿದ್ದು ಹತೋಟಿಗೆ ತೆಗೆದುಕೊಳ್ಳಲು, ಮುಂದಿನ ವಿಧಾನಸಭಾ ಚುನಾವಣೆ ಲಕ್ಷ್ಯದಲ್ಲಿಟ್ಟುಕೊಂಡು ಹಿರಿಯರಿಗೆ ಹಾಗೂ ಕ್ರಿಯಾಶೀಲರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ ಉಪಮೇಯರ್ ಸ್ಥಾನಕ್ಕೆ ನೆಪ ಮಾತ್ರಕ್ಕೆ ಕಣಕ್ಕಿಳಿಯಬಹುದಾದರೂ ಸಂಖ್ಯಾಬಲ ಕೊರತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
26, 27ಕ್ಕೆ ಸಭೆ
ಮೇಯರ್ ಉಪಮೇಯರ್ ಚುನಾವಣೆ 28ಕ್ಕೆ ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಸಭೆ 26 ಅಥವಾ 27ಕ್ಕೆ ನಡೆಯಬಹುದಾಗಿದೆ.ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ತೆಗೆದುಕೊಳ್ಳುವ ನಿರ್‍ಣಯಗಳೇ ಅಂತಿಮವಾಗಲಿದೆ. ದಿ 15ರಂದು ಜೋಶಿ, ಸಿಎಂ ಬೊಮ್ಮಾಯಿ ಮುಂತಾದವರು ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸುವರಾದರೂ ಪಾಲಿಕೆ ಬಗೆಗೆ ಚರ್ಚಿಸುವ ಸಾಧ್ಯತೆ ಕಡಿಮೆ.
ಮೇಯರ್ ರೇಸ್‌ನಲ್ಲಿ
ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಶಿವು ಹಿರೇಮಠ ವೀರಣ್ಣ ಸವಡಿ, ರಾಜಣ್ಣ ಕೊರವಿ, ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ,ಶಿವು ಮೆಣಸಿನಕಾಯಿ,