ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿಂದು ವಾರ್ಷಿಕ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ದೇಶಪಾಂಡೆನಗರದ ಜಿಮಖಾನಾ ಮೈದಾನದಲ್ಲಿ ಆರಂಭಗೊಂಡಿದ್ದು ಮಧ್ಯಾಹ್ನದ ವೇಳೆಗೆ ಕ್ಯಾಪ್ಷನ್ ಇಲೆವನ್, ಬ್ರೇಕಿಂಗ್ ನ್ಯೂಸ್ ಹಾಗೂ ಹೆಡ್‌ಲೈನ್ ತಂಡಗಳು ಗೆಲುವು ದಾಖಲಿಸಿವೆ.
ಬೆಳಿಗ್ಗೆ ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ಹಾಗೂ ಮಾಜಿ ಮೇಯರ್ ವೀರಣ್ಣ ಸವಡಿ, ಹು.ಧಾ ಕ್ರೆಡಾಯ್ ಅಧ್ಯಕ್ಷ ಸಾಜಿದ್ ಪರಾಶ ಇವರುಗಳು ಬ್ಯಾಟಿಂಗ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಸದಾ ಒತ್ತಡದಲ್ಲೇ ಇರುವ ಪತ್ರಕರ್ತರೆಲ್ಲರೂ ಸೇರಿ ಇಂತಹ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಉಭಯತರರನ್ನು ಸಂಘದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ ಸ್ವಾಗತಿಸಿ ನಿರೂಪಿಸಿದರು. ಕ್ರಿಕೆಟ್ ಸಮಿತಿಯ ಉಸ್ತುವಾರಿಗಳಾದ ಗುರುರಾಜ ಹೂಗಾರ, ಮೆಹಬೂಬ ಮುನವಳ್ಳಿ, ಪ್ರಕಾಶ ಶೇಟ, ಬಸವರಾಜ ಹೂಗಾರ, ರಾಜು ಮುದಗಲ್ ನಿರ್ವಹಿಸಿದರು. ಉಪಾಧ್ಯಕ್ಷ ಜಗದೀಶ ಬುರ್ಲಬಡ್ಡಿ, ಸಹ ಕಾರ್‍ಯದರ್ಶಿ ಡಾ.ವಿರೇಶ ಹಂಡಗಿ, ಖಜಾಂಚಿ ಗುರು ಭಾಂಡಗೆ , ಕಾರ್ಯಕಾರಿ ಸದಸ್ಯರಾದ ಮಧುಕರ ಭಟ್, ಮಂಜುನಾಥ ಜರತಾರಘರ, ಡಿ.ಹೇಮಂತ ಸಹಿತ ಎಲ್ಲ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತರು ಉಪಸ್ಥಿತರಿದ್ದರು.
ಒಟ್ಟು 13 ತಂಡಗಳು ಭಾಗವಹಿಸಿರುವುದು ವಿಶೇಷವಾಗಿದೆ.ಮೊದಲ ಪಂದ್ಯದಲ್ಲಿ ಪ್ಯಾಕೇಜ್ ಸ್ಟೋರಿ ತಂಡದ ವಿರುದ್ದ ಕ್ಯಾಷ್ಷನ್ ಇಲೆವನ್ ತಂಡ ಸೂಪರ್ ಗೆಲುವು ದಾಖಲಿಸಿತು.ಮೊದಲು ಬ್ಯಾಟ್ ಮಾಡಿದ ಪ್ಯಾಕೇಜ್ ತಂಡ ನಿಗದಿತ ಎಂಟು ಓವರ್‌ಗಳಲ್ಲಿ 52 ರನ್ನು ಗಳಿಸಿದರೆ, ಗೆಲುವಿನ ಬೆನ್ನತ್ತಿದ ಕ್ಯಾಪ್ಷನ್ ತಂಡವೂ ಅಷ್ಟೆ ಮೊತ್ತ ಗಳಿಸಿತು. ಸೂಪರ್ ಓವರ್‌ನಲ್ಲಿ ೭ ರನ್ನು ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
ಎರಡನೇ ಪಂದ್ಯದಲ್ಲಿ ಬ್ರೇಕಿಂಗ್ ನ್ಯೂಸ್ ತಂಡ ಬ್ಯಾನರ್ ಇಲೆವನ್ ತಂಡದ ವಿರುದ್ದ 46 ರನ್ನುಗಳ ಭರ್ಜರಿ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಬ್ರೇಕಿಂಗ್ ನ್ಯೂಸ್ ತಂಡ ನಿಗದಿತ ೮ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 132 ರನ್ ಗಳಿಸಿದರೆ ಬ್ಯಾನರ್ ಇಲೆವನ್ 36 ರನ್ ಗಳಿಸಲಷ್ಟೆ ಯಶಸ್ವಿಯಾಯಿತು. ನಾರಾಯಣಗೌಡ 67, ಸುರೇಶ ನಾಯಕ 57 ರನ್ನಗಳಿಸಿ ಅಜೇಯರಾಗುಳಿದರು.
ಮೂರನೇ ಪಂದ್ಯದಲ್ಲಿ ಹೆಡ್‌ಲೈನ್ ಇಲೆವನ್ ಸ್ಕೂಪ್ ಇಲೆವನ್ ವಿರುದ್ದ ಗೆಲುವು ಸಾಧಿಸಿತು. ಸ್ಕೂಪ್ ತಂಡ ಕೇವಲ ೨೮ ರನ್ನುಗಳಿಸಿದರೆ, ಹೆಡ್‌ಲೈನ ತಂಡ ಗುರಿಯನ್ನು ಸುಲಭವಾಗಿ ತಲುಪಿತು.