’ಶಿಷ್ಯ’ರ ಪ್ರತಿಷ್ಠಾಪನೆಗೆ ಶಾಸಕರ, ಮಾಜಿ ಶಾಸಕರ ಕಸರತ್ತು
ಧಾರವಾಡ : ಧಾರವಾಡ ಗ್ರಾಮಾಂತರ ಜಿಲ್ಲೆಯಲ್ಲಿನ ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷರ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದ್ದು, ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ನಿಂಗಪ್ಪ ಸುತಗಟ್ಟಿ ಅವರು ಆಯ್ಕೆ ಆದ ಬಳಿಕ ಮಂಡಲ ಅಧ್ಯಕ್ಷರ ಆಯ್ಕೆ ನಡೆಯಬೇಕಿತ್ತು. ಆದರೆ, ಆ ಪ್ರಕ್ರಿಯೆ ವಿಳಂಭವಾಗುತ್ತಲೇ ಸಾಗಿದೆ.
ಜಿಲ್ಲೆಯ ಏಳು ಮಂಡಲ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ತಿಂಗಳುಗಳು ಕಳೆದಿವೆ. ಪ್ರತಿ ಮಂಡಲದಿಂದ ಸರಾಸರಿ 12ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಅರ್ಜಿಗಳನ್ನು ತಾಲೂಕಾ ಘಟಕ ಪರಿಶೀಲಿಸಿ ಮೂರು ಹೆಸರುಗಳನ್ನು ಮಾತ್ರ ಜಿಲ್ಲಾ ಕೋರ್ ಕಮೀಟಿಗೆ ಸಲ್ಲಿಸಿಯೂ ಆಗಿದೆ.
ಈಗಾಗಲೇ ಜಿಲ್ಲಾ ಕೋರ್ ಕಮೀಟಿಯ ಒಂದು ಸಭೆ ಕೂಡ ಜರುಗಿದರೂ ಅಧ್ಯಕ್ಷರ ಪಟ್ಟಿ ಅಂತಿಮವಾಗಿಲ್ಲ. ಜಿಲ್ಲೆಯ ಶಾಸಕರು ಮತ್ತು ಮಾಜಿ ಶಾಸಕರು ತಮ್ಮವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಪಟ್ಟು ಹಿಡಿದಿರುವುದು ಪಟ್ಟಿ ಅಂತಿಮಗೊಳಿಸಲು ಕಾರಣ ಎನ್ನಲಾಗುತ್ತಿದೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ಲಿಂಗಾಯತ, ಹಿಂದುಳಿದ ವರ್ಗ ಸೇರಿದಂತೆ ಇತರ ಸಮುದಾಯಗಳ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾ ಕೋರ್ ಕಮೀಟಿಯಲ್ಲಿ ಲಿಂಗಾಯತ ಅದರಲ್ಲಿಯೂ ಪಂಚಮಸಾಲಿ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಪಟ್ಟು ಹಿಡಿದಿದ್ದು ಜಿಲ್ಲಾ ಕೋರ್ ಕಮೀಟಿಯಲ್ಲಿ ನ ಈ ಬೆಳವಣಿಗೆಗಳಿಂದ ಹಿಂದುಳಿದ ಸಮುದಾಯದ ಆಸಕ್ತ ಮತ್ತು ಅರ್ಹ ಆಕಾಂಕ್ಷಿಗಳಲ್ಲಿ ಬೇಸರ ತರಿಸಿದೆ ಎಂದು ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಅದರಲ್ಲಿಯೂ ಈಗ ಜಿಲ್ಲೆಯ ಸುಪ್ರೀಮೋ ಆದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಯಾವ ರೀತಿಯಲ್ಲಿ ನಿಷ್ಟಾವಂತರಿಗೆ ಸಾಮಾಜಿಕ ನ್ಯಾಯ ಒದಗಿಸುವರು ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.
ಕಲಘಟಗಿ, ಕುಂದಗೋಳ ಮುಂತಾದೆಡೆ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ ಎನ್ನಲಾಗುತ್ತಿದೆ.
೨-೩ ದಿನದಲ್ಲಿ ಅಂತಿಮ
ಈಗಾಗಲೇ ಜಿಲ್ಲಾ ಕೋರ್ ಕಮೀಟಿಯ ಸಭೆ ಒಂದು ಸಭೆ ಜರುಗಿದೆ. ಅನೇಕರು ಅರ್ಹರಿದ್ದರೂ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ಯಾವುದೇ ರೀತಿಯ ಗೊಂದಲವಿಲ್ಲ. ಇನ್ನು ೨-೩ ದಿನಗಳಲ್ಲಿ ಏಳು ಮಂಡಲ ಅಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
ನಿಂಗಪ್ಪ ಸುತಗಟ್ಟಿ
ಜಿಲ್ಲಾ ಅಧ್ಯಕ್ಷರು