ಪಕ್ಷೇತರರಾಗಿ ಸ್ಪರ್ಧಿಸಲು ಭಕ್ತರ ಒಕ್ಕೊರಲ ಒತ್ತಾಯ
ಹಿಂದೆ ಸರಿಯುವುದಿಲ್ಲ, ಶೀಘ್ರವೇ ಅಂತಿಮ ನಿರ್ಧಾರ: ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿ : ರಾಜ್ಯದ ಬಹುಸಂಖ್ಯಾತ ಮತದಾರರ ಗಮನ ಸೆಳೆದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಕಣಕ್ಕೆ ಕೊನೆಗೂ ದಿಂಗಾಲೇಶ್ವರ ಶ್ರೀಗಳ ಎಂಟ್ರಿ ಬಹುತೇಕ ಖಚಿತವಾದಂತಾಗಿದೆ.
ಇದೇ ವಿಷಯದ ಕುರಿತು ಚರ್ಚಿಸಲು ಮಂಗಳವಾರ ಧಾರವಾಡದಲ್ಲಿ ನಡೆದ ಭಕ್ತರ ಸಭೆಯಲ್ಲಿ ಸೇರಿದ್ದ ಸಾವಿರಾರು ಭಕ್ತರು ಒಕ್ಕೊರಲಿನಿಂದ ಶ್ರೀಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುವ ಮೂಲಕ ಬೆಂಬಲಿಸಿದರು.
ಸಭೆಯ ನಂತರ ವರದಿಗಾರರೊಂದಿಗೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಚುನಾವಣೆಗೆ ನಾನೇ ಸ್ಪರ್ಧೆ ಮಾಡುವಂತೆ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಆಗಬೇಕೆಂದು ಭಕ್ತರು ಹೇಳಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಕೆಂದು ಭಕ್ತರು ಸಲಹೆ ನೀಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನೀವೇ ಬರಬೇಕಂದು ಭಕ್ತರು ಒಕ್ಕೊರಲಿನ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಹಿರಿಯ ಗುರುಗಳು ಮತ್ತು ಮಠದ ಭಕ್ತರ ಅಭಿಪ್ರಾಯ ಕೇಳಬೇಕಿದ್ದು, ಅತಿಶೀಘ್ರದಲ್ಲಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ. ನಾನು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ, ಯಾವ ಕಾರಣಕ್ಕೂ ನಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಶ್ರೀಗಳು ವಿಶ್ವಾಸದಿಂದ ಹೇಳಿದರು.