ಹುಬ್ಬಳ್ಳಿ-ಧಾರವಾಡ ಸುದ್ದಿ

ಶಿಂಧೆ ಸರ್ಕಾರ ವಜಾ ಮಾಡಿ: ಸಿದ್ದು ಆಗ್ರಹ

ರಾಜ್ಯದ ಹಿತಕಾಯದ ಬೊಮ್ಮಾಯಿ ರಾಜೀನಾಮೆ ನೀಡಲಿ

ಹುಬ್ಬಳ್ಳಿ: ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ಕೇಂದ್ರ ಸರ್ಕಾರ ಕೂಡಲೇ ವಜಾ ಮಾಡಬೇಕಲ್ಲದೇ ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.


ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗೆ ಇರುವ ೮೬೫ ಹಳ್ಳಿಗಳಿಗೆ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ ಎಂಬ ಆರೋಗ್ಯ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಹೊರಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಹಂಚಿಕೆಗೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. 1966ರಲ್ಲಿ ಅವರು ವರದಿ ಸಲ್ಲಿಸಿದ್ರು, ಅವತ್ತಿನಿಂದ ನಾವು ಒಪ್ಪಿಕೊಂಡಿದ್ದೇವೆ, ಮಹಾರಾಷ್ಟ್ರದವರು ತಕರಾರು ಮಾಡುತ್ತಲೇ ಇದ್ದಾರೆ. ಕೇಂದ್ರ ಸರ್ಕಾರ ಮಹಾಜನ್ ಆಯೋಗವನ್ನು ರಚನೆ ಮಾಡಿತ್ತು, ಮಹಾಜನ್ ಅವರು ಮಹಾರಾಷ್ಟ್ರದವರೇ. ನಾವು ಈ ವರದಿಯನ್ನು ಗೌರವಿಸಬೇಕು ಎಂದು ಒಪ್ಪಿಕೊಂಡಿದ್ದೇವೆ, ಮಹಾರಾಷ್ಟ್ರದವರು ಈಗ ೮೬೫ ಹಳ್ಳಿಗಳು ತಮ್ಮವು ಎಂದು ಹೇಳುತ್ತಿದ್ದಾರೆ.

ಆರೋಗ್ಯ ವಿಮಾ ಯೋಜನೆಯನ್ನು ೮೬೫ ಹಳ್ಳಿಗಳಿಗೆ ಜಾರಿ ಮಾಡಬೇಕು ಎಂದು ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದಾರೆ, ಈ ಬಗ್ಗೆ ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನಿದೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡ ಮಾತನಾಡುತ್ತಿಲ್ಲ, ಇಲ್ಲಿ ಸರ್ಕಾರ ಸತ್ತು ಹೋಗಿದೆಯಾ ಎಂಬ ಅನುಮಾನ ಬರುತ್ತಿದೆ ಎಂದರು. ಮಹಾರಾಷ್ಟ್ರ ಸರ್ಕಾರ ರಾಜ್ಯದ ಗಡಿಯೊಳಗೆ ಇರುವ ಹಳ್ಳಿಗಳಿಗೆ ಬಂದು ಆರೋಗ್ಯ ವಿಮಾ ಸೌಲಭ್ಯವನ್ನು ನೀಡುತ್ತೇವೆ ಎಂದರೂ ಕ್ರಮ ಕೈಗೊಳ್ಳಬೇಕಾದರೂ ಸುಮ್ಮನಿದ್ದಾರೆ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತ್ತು ಹೋಗಿವೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಪ್ರಧಾನಿಗಳು ಕೂಡ ಅವರಿಗೆ ಬುದ್ದಿ ಹೇಳಿಲ್ಲ. ಇದು ನಮ್ಮ ಸಾರ್ವಭೌಮತೆಗೆ ಸವಾಲು ಎಂದರು.


ಮಹಾರಾಷ್ಟ್ರದ ಕನ್ನಡಿಗರು ಕರ್ನಾಟಕ ಸೇರುವ ಹೇಳಿಕೆ ನೀಡಿದ್ದರು, ಹಾಗಂತ ಅದಕ್ಕೆ ನಾವು ಮಧ್ಯಪ್ರವೇಶ ಮಾಡಲು ಆಗುತ್ತಾ? ಅವರ ಸಮಸ್ಯೆಗಳಿಗೆ ಅಲ್ಲಿನ ಸರ್ಕಾರ ಪರಿಹಾರ ನೀಡಿಲ್ಲ ಎಂದು ನಾವು ಅವರಿಗೆ ಕಾರ್ಯಕ್ರಮಗಳನ್ನು ನೀಡಲು ಆಗುತ್ತದಾ? ನಾವು ಅಲ್ಲಿನ ಕನ್ನಡಿಗರಿಗೆ ಸವಲತ್ತು ನೀಡಲು ಹೋದರೆ ಅದು ಒಕ್ಕೂಟ ವ್ಯವಸ್ಥೆಯ ಒಳ್ಳೆಯ ಲಕ್ಷಣವಾಗಲ್ಲ. ಅದೇ ರೀತಿ ಅವರು ಕೂಡ ಇಲ್ಲಿನವರಿಗೆ ಕಾರ್ಯಕ್ರಮ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಕರ್ನಾಟಕದ ಗಡಿಯೊಳಗೆ ಇರುವ ಜನರಿಗೆ ಕಾರ್ಯಕ್ರಮ ನೀಡುತ್ತೇವೆ ಎಂಬ ಹೇಳಿಕೆ ನೀಡಿರುವವರು ಏಕನಾಥ್ ಶಿಂಧೆ ಸರ್ಕಾರದಲ್ಲಿರುವ ಹಿರಿಯ ನಾಯಕರು. ನಾವು ಶಾಂತವಾಗಿದ್ದೀವಿ ಎಂದರೆ ನಮ್ಮ ನೆಲ, ಜಲದ ವಿಚಾರದಲ್ಲಿ ಮಾತನಾಡಲ್ಲ ಎಂದರ್ಥವಲ್ಲ, ನಮ್ಮನ್ನು ಪದೇ ಪದೇ ಕೆಣಕಲು ನೋಡುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ, ಮಾಜಿ ಸಚಿವ ಜಮೀರ ಅಹ್ಮದ ಖಾನ, ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ,ಅನಿಲಕುಮಾರ ಪಾಟೀಲ, ಮಾಜಿ ಶಾಸಕರಾದ ಎನ್.ಎಚ್.ಕೋನರೆಡ್ಡಿ, ಹನುಮಂತಪ್ಪ ಆಲ್ಕೋಡ, ಬಿ.ಆರ್.ಯಾವಗಲ್, ಪ್ರಕಾಶ ರಾಠೋಡ, ಮುಖಂಡ ನಾಗರಾಜ ಗೌರಿ ಇನ್ನಿತರರಿದ್ದರು.

ಇಂದಿರಾ ಕ್ಯಾಂಟೀನ್ ಮುಚ್ಚಿದ್ರೆ ಬಡವರ ಶಾಪ

ಹುಬ್ಬಳ್ಳಿ: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿದರೆ ಬಡವರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ, ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಏಕೈಕ ಕಾರಣಕ್ಕೆ ಕ್ಯಾಂಟೀನ್ ಗಳನ್ನು ಮುಚ್ಚಿದರೆ ಬಡವರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರ ಹೆಸರಿಟ್ಟು ಕ್ಯಾಂಟೀನ್ ಗಳನ್ನು ಆರಂಭ ಮಾಡಿದ್ದೆವು. ಕ್ಯಾಂಟೀನ್ ಸ್ಥಾಪನೆಯ ನಮ್ಮ ಉದ್ದೇಶ ಬಡವರು, ಹಳ್ಳಿಗಳಿಂದ ಬರುವ ಜನರು, ಆಸ್ಪತ್ರೆಗಳಿಗೆ ಬರುವವರು, ವಿದ್ಯಾರ್ಥಿಗಳು ಮುಂತಾದವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗಬೇಕು ಎಂಬುದಾಗಿತ್ತು. ಒಟ್ಟು ನಾವು 400 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪನೆ ಮಾಡಿದ್ದೆವು. ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿದೆ. ಇದು ಬಡ ಜನರಿಗೆ ಮಾಡುತ್ತಿರುವ ದ್ರೋಹವಾಗುತ್ತದೆ. ಜಯಲಲಿತ ಅವರು ಆರಂಭ ಮಾಡಿದ್ದ ಅಮ್ಮ ಕ್ಯಾಂಟೀನ್ ಗಳನ್ನು ಡಿಎಂಕೆ ಸರ್ಕಾರ ಬಂದ ಮೇಲೆ ಮುಚ್ಚಲಿಲ್ಲ, ಅದನ್ನು ಮುಂದುವರೆಸಿಕೊಂಡು ಹೋಗಿದ್ದರು. ಈ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಇನ್ನೂ300 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುವುದಾಗಿ ಹೇಳಿ ಈಗ ಮುಚ್ಚಲು ಹೊರಟಿದ್ದಾರೆ ಎಂದರು.


ಯಾವ ಕಾರಣಕ್ಕೂ ಈ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಬಾರದು ಎಂದು ನಾನು ಒತ್ತಾಯ ಮಾಡುತ್ತೇನೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಕಾರಣಕ್ಕೆ ಈ ಕ್ಯಾಂಟೀನ್ ಗಳನ್ನು ಮುಚ್ಚಲು ಹೋಗಬಾರದು. ವಾಜಪೇಯಿ, ಸಾವರ್ಕರ್, ದೀನದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿಕೊಂಡಿದ್ದಾರೆ, ಅವನ್ನೆಲ್ಲಾ ನಾವು ತೆಗೆದುಹಾಕುತ್ತೇವೆ ಎಂದು ಹೇಳಿದ್ದೇವಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪ್ರವಾಹ ಬಂದು ಲಕ್ಷಾಂತರ ಎಕರೆ ಬೆಳೆ ನಷ್ಟವಾದಾಗ, ಕೊರೊನಾ ಬಂದು ಆಸ್ಪತ್ರೆ, ವೆಂಟಿಲೇಟರ್, ಬೆಡ್ ಸಿಗದೆ ಜನರು ಹಾದಿ ಬೀದಿಯಲ್ಲಿ ಪ್ರಾಣ ಬಿಡುವಾಗ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ,ಪಿ ನಡ್ಡಾ ಅವರು ಈಗ ಚುನಾವಣೆ ಇರುವ ಕಾರಣಕ್ಕೆ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ, ಇಲ್ಲಿ ಬಂದು ನಮ್ಮ ಸರ್ಕಾರದ ಯೋಜನೆಗಳನ್ನು ಉದ್ಘಾಟಿಸಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

administrator

Related Articles

Leave a Reply

Your email address will not be published. Required fields are marked *