ಹುಬ್ಬಳ್ಳಿ: ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ. ಇದು ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಸಲುವಾಗಿ ಮುಖ್ಯಮಂತ್ರಿಯವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಇದರಿಂದ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗುತ್ತದೆ. ಮುಂಬರುವ ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದರು.
ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವಾಗಲೂ ಈ ಮಾತು ಹೇಳಿಕೊಂಡು ಇರುತ್ತಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹುಳ ಬಿಡುವ ಕೆಲಸ ಮಾಡುತ್ತಿದ್ದಾರೆ. ಅವರು ಹೇಳುವಂತೆ ಕಾಂಗ್ರೆಸ್‌ಗೆ ಯಾರು ಸೇರ್ಪಡೆಯಾಗುತ್ತಿದ್ದಾ ರೆಂಬ ಬಗ್ಗೆ ಧೈರ್ಯವಾಗಿ ಹೇಳಲಿ. ಕದ್ದು ಮುಚ್ಚಿ ಮಾಡುವುದು ಬೇಡ. ನೇರವಾಗಿ ಹೇಳಲಿ ಎಂದರು.
ಸಚಿವ ಸಂಪುಟ ವಿಸ್ತರಣೆ ಮಾಡಲಿಲ್ಲ ಅಂದರೆ ಕೆಲ ಶಾಸಕರು ಕಾಂಗ್ರೆಸ್ ಹೋಗುತ್ತಾರಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಆಗುವುದಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನಾತ್ಮಕವಾಗಿದೆ. ಇದು ಎಲ್ಲ ಶುದ್ಧ ಸುಳ್ಳು. ಮಣಿಪುರ, ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ನಶಿಸಿಹೋಗುತ್ತದೆ. ಕಾಂಗ್ರೆಸ್ ಗೆ ಯಾರು ಹೋಗುವುದಿಲ್ಲ ಎಂದರು.