ಬೇಸತ್ತ ಬಿಜೆಪಿ ಸದಸ್ಯರು – ಇಂದು ಮಹತ್ವದ ಕೋರ್ ಕಮಿಟಿ ಸಭೆ
ಹುಬ್ಬಳ್ಳಿ : ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರು ಅಧ್ಯಕ್ಷರಾದಲ್ಲಿ ಅವರ ಗಂಡಂದಿರೇ ದರ್ಬಾರು ನಡೆಸುವುದು ಸಾಮಾನ್ಯವಾದರೂ ಈ ಬಾರಿ ಎರಡನೇ ಅತಿದೊಡ್ಡ ಮಹಾನಗರಪಾಲಿಕೆಯಲ್ಲೂ ಅಂತಹ ನಡೆ ನಡೆದಿರುವುದು ಸ್ವತಃ ಬಿಜೆಪಿಯ ಪಾಲಿಕೆಯ ಸದಸ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜೂನ್ ೨೦ರಂದು ನಡೆದ ತೀವ್ರ ಕುತೂಹಲ ಕೆರಳಿಸಿದ್ದ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸಾಮಾನ್ಯರಿಗೆ ಮೀಸಲಾದ ಸ್ಥಾನದಲ್ಲಿ ಹಿಂದುಳಿದ ವರ್ಗ ಅ ವರ್ಗಕ್ಕೆ ಸೇರಿದ ೪೯ನೇ ವಾರ್ಡಿನಿಂದ ಆಯ್ಕೆಯಾಗಿರುವ ಮೊದಲ ಬಾರಿಗೆ ಪಾಲಿಕೆ ಹೊಸ್ತಿಲು ತುಳಿದಿದ್ದ ವೀಣಾ ಚೇತನ ಬಾರದ್ವಾಡ ಅವರನ್ನು ೨೨ನೇ ಪ್ರಥಮ ಪ್ರಜೆಯಾಗಿ ಆಯ್ಕೆ ಮಾಡಿದ ತಪ್ಪಿಗೆ ಪಕ್ಷದ ಪಾಲಿಕೆ ಸದಸ್ಯರೆ ಕೈ ಕೈ ಹಿಚುಕಿಕೊಳ್ಳುವಂತಾಗಿದೆ.
ಮೇಯರ್ ವೀಣಾ ಬದಲು ಅವರ ಪತಿಯೇ ದರ್ಬಾರು ನಡೆಸುತ್ತಿದ್ದು ಎಲ್ಲ ವಿಚಾರದಲ್ಲೂ ಮೂಗು ತೂರಿಸುತ್ತಿದ್ದು ಅಲ್ಲದೇ ಅಧಿಕಾರಿಗಳ ಮೇಲೆ ಸಹ ದರ್ಪ ಮೆರೆಯುತ್ತಿರುವುದಲ್ಲದೇ ಈಗಾಗಲೇ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ’ಪರ್ಸಂಟೇಜ್’ ಪರಂಪರೆಗೆ ಮುನ್ನುಡಿ ಬರೆಯಲು ಮುಂದಾಗಿರುವುದು ಕೇವಲ ೨ ತಿಂಗಳಲ್ಲೇ ಸದಸ್ಯರ ಅಸಹನೆ ಭುಗಿಲು ಮುಟ್ಟಿದ್ದು ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಪಾಲಿಕೆ ಕೋರ್ ಕಮಿಟಿ ಕರೆಯಲಾಗಿದೆ.
ಪಾಲಿಕೆ ವಿಷಯ ಚರ್ಚಿಸಲು ಕೋರ್ ಕಮೀಟಿ ಸಭೆ ಕರೆಯಲಾಗಿದೆ ಎಂಬುದನ್ನು ಸ್ವತಃ ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಹಾಗೂ ಪಾಲಿಕೆ ಸಭಾ ನಾಯಕ ಶಿವು ಹಿರೇಮಠ ಖಚಿತಪಡಿಸಿದ್ದಾರೆ.
ಪಾಲಿಕೆ ಕೋರ್ ಕಮೀಟಿ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು, ಮೇಯರ್,ಉಪಮೇಯರ್, ಮಾಜಿ ಮೇಯರ್‌ಗಳು ಪೂರ್ವ ಕ್ಷೇತ್ರದ ಪ್ರತಿನಿಧಿಗಳು, ಮಾಜಿ ಪಾಲಿಕೆ ಸಭಾನಾಯಕರು ಮುಂತಾದವರು ಭಾಗವಹಿಸಲಿದ್ದಾರೆ.
ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಸಾಮಾನ್ಯವಾಗಿ ಮೇಯರ್ ,ಉಪ ಮೇಯರ್ ಪಾಲ್ಗೊಳ್ಳುವುದು ವಾಡಿಕೆಯಾಗಿದ್ದು ಆದರೆ ಮೇಯರ್ ಪತಿ ಪಾಲ್ಗೊಳ್ಳುತ್ತಿದ್ದಾರೆನ್ನಲಾಗಿದ್ದು ಅಲ್ಲದೆ ಕಾಮಗಾರಿ ಟೆಂಡರ್, ಸಿಸಿ ನೀಡಿಕೆ ಮುಂತಾದ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಅಧಿಕಾರಿಯೊಬ್ಬರೇ ಬಹಿರಂಗಪಡಿಸಿದ್ದಾರೆ.
ಉದ್ಯಮ ಪರವಾನಿಗೆ ಪ್ರಮಾಣಪತ್ರ ನೀಡುವುದನ್ನು ಕೇಂದ್ರಿಕರಿಸಲಾಗಿದ್ದು, ಅಲ್ಲಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅದನ್ನು ವಿಕೇಂದ್ರಿಕರಣಗೊಳಿಸಿ ವಲಯವಾರು ನೀಡುವಂತೆ ಮೇಯರ್ ಪತ್ರ ಬರೆದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಮೇಯರ್ ಕಚೇರಿಗೆ ಬರುವುದು ವಿಳಂಭವಾದರೂ ಅವರ ಪತಿ ೧೦ ಹೊಡೆಯುತ್ತಿದ್ದಂತೆ ಹಾಜರಿರುವರು ಎಂದು ಕಚೇರಿ ಸಿಬ್ಬಂದಿಗಳೇ ಬಾಯಿ ಬಿಡುತ್ತಾರೆ.
ಈಗಾಗಲೇ ಸುಮಾರು 20 ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವರ್ಗಾವಣೆಗೆ ಮೇಯರ್ ಹೆಸರಲ್ಲಿ, ಉಪ ಮೇಯರ್ ಹೆಸರಲ್ಲಿ ಪಾಲಿಕೆ ಆಯುಕ್ತರಿಗೆ ನೀಡಲಾಗಿದೆಯೆನ್ನಲಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಈ ಹಿಂದೆ ಹಲವು ಮಹಿಳಾ ಮೇಯರ್‌ಗಳಾದರೂ ಗಂಡನ ದರ್ಬಾರ ಈ ಪರಿ ಮಿತಿ ಮೀರಿರಲಿಲ್ಲ ಎಂದು ಪಕ್ಷದ ಸದಸ್ಯರೇ ಹೇಳುತ್ತಾರೆ.
ಮಹಾನಗರ ಪಾಲಿಕೆಯ ವಿಚಾರದಲ್ಲಿ ಅನೇಕ ವಿಷಯಗಳ ಚರ್ಚಿಸಲು ಇಂದು ಕೋರ್ ಕಮೀಟಿ ಸಭೆ ಕರೆಯಲಾಗಿದೆ.
ಸಂಜಯ ಕಪಟಕರ, ಮಹಾನಗರ ಬಿಜೆಪಿ ಅಧ್ಯಕ್ಷರು
ಮೇಯರ್ ಪತಿ ಪಾಲಿಕೆ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಗುಸು ಗುಸು ಇದೆ. ಇಂದಿನ ಕೋರ ಕಮೀಟಿಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಈ ಬಗ್ಗೆ ಹೆಚ್ಚೇನನ್ನೂ ಹೇಳಲು ಸಾಧ್ಯವಿಲ್ಲ.
ವೀರಣ್ಣ ಸವಡಿ, ಮಾಜಿ ಮಹಾಪೌರರು
ಮಹಾನಗರಪಾಲಿಕೆಯ ವಿವಿಧ ವಿಷಯಗಳ ಬಗ್ಗೆ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು.
ಶಿವು ಹಿರೇಮಠ, ಪಾಲಿಕೆ ಸಭಾನಾಯಕ