ಅಧಿಕಾರ ಹಿಡಿಯಲು ಕಾಂಗ್ರೆಸ್, ಕಮಲ ಬೆಂಬಲಿತರ ಪೈಪೋಟಿ
ಧಾರವಾಡ: ಅವಿಭಜಿತ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಕೆಸಿಸಿ ಬ್ಯಾಂಕ್ನ ಆಡಳಿತ ಮಂಡಳಿ ಆಯ್ಕೆಗೆ ದಿ.23ರ ಮಹೂರ್ತ ನಿಗದಿಯಾಗಿದ್ದು ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿಯ ಪೈಪೋಟಿ ನಿಶ್ಚಿತವಾಗಿದೆ.
ಕಳೆದ ದಿ. 8 ಕ್ಕೆ ಹಾಲಿ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡಿದ್ದು, ನೂತನ ಆಡಳಿತ ಮಂಡಳಿ ಇದೀಗ ಅಸ್ತಿತ್ವಕ್ಕೆ ಬಂದಂತಾಗಿದ್ದು,ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ದಿ.23 ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಶಾಅಲಂ ಹುಸೇನ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ ತಿಂಗಳಲ್ಲಿ ಆಡಳಿತ ಮಂಡಳಿಯ 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತಾದರೂ ವಿವಿಧ ಕಾರಣಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದರಿಂದ, ಕೆಲ ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಲು ವಿಳಂಬವಾಗಿತ್ತು. ನಿನ್ನೆ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ನರಗುಂದ ತಾಲೂಕಿನ ಪ್ರಕಟವಾಗುವುದರೊಂದಿಗೆ ಎಲ್ಲ ಫಲಿತಾಂಶ ಪ್ರಕಟವಾದಂತಾಯಿತು.
ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಮಹಾಬಳೇಶ್ವರಗೌಡ ಶಿದ್ಧನಗೌಡ ಪಾಟೀಲ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಮಲ್ಲನಗೌಡ ತಿಮ್ಮನಗೌಡರ 8ಮತಗಳನ್ನು ಪಡೆದು ಸೋಲನುಭವಿಸಿದರು.
ಪ್ರಸಕ್ತ ಬ್ಯಾಂಕಿನ 20 ಸದಸ್ಯರಲ್ಲಿ 11 ಕಾಂಗ್ರೆಸ್ ಬೆಂಬಲಿತರಿದ್ದು, 9 ಜನ ಬಿಜೆಪಿ ಬೆಂಬಲಿತರಿದ್ದಾರೆ. ಮೊದಲ ಹಂತದಲ್ಲಿ ಕಮಲ ಬೆಂಬಲಿಗರು ಮುನ್ನಡೆ ಸಾದಿಸಿದ್ದಾರಾದರೂ ಉಳಿದಂತೆ ತದನಂತರ ಕಾಂಗ್ರೆಸ್ ಬೆಂಬಲಿಗರ ಕೈ ಮೇಲಾಗಿದೆಯಲ್ಲದೇ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ
ಮತಾಧಿಕಾರ ಹೊಂದಿದ್ದುಅಲ್ಲದೇ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅವರ ಬಲ 12ಕ್ಕೆ ನಿಂತಿದ್ದು ಆಪರೇಷನ್ ಅಲ್ಲದೇ ಪವಾಡ ಎರಡೂ ನಡೆಯದೇ ಹೋದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಕಾಂಗ್ರೆಸ್ ಪಾಲಾಗುವುದು ನಿಶ್ಚಿತ. ಕೈ ಬೆಂಬಲಿತರ ಪೈಕಿ ಹಿರಿಯರಾದ ಕೊಟ್ರೇಶಪ್ಪ ಬಸೇಗಣ್ಣಿ (ಹಾವೇರಿ), ಶಿವಕುಮಾರಗೌಡ ಪಾಟೀಲ (ಗದಗ) ಮತ್ತು ಮಂಜುನಾಥಗೌಡ ಮುರಳ್ಳಿ ( ಧಾರವಾಡ) ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದೆ. ಕೊಟ್ರೇಶಪ್ಪ ಬಸೇಗಣ್ಣಿ ಮತ್ತು ಶಿವಕುಮಾರಗೌಡ ಪಾಟೀಲರಿಗೆ ಸಚಿವ ಎಚ್.ಕೆ.ಪಾಟೀಲರ ಬಲವಿದ್ದರೆ, ಮಂಜುನಾಥಗೌಡ ಮುರಳ್ಳಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಪ್ತರಾಗಿದ್ದಾರೆ.
ಕೊಟ್ರೇಶಪ್ಪ ಬಸೇಗಣ್ಣಿ ಪರ ಗದಗ, ಹಾವೇರಿ ಸದಸ್ಯರ ಒಲವು ಇದ್ದರೂ ಆದರೆ, ಆರನೇ ಬಾರಿಗೆ ಬಲಗಾಲಿಟ್ಟಿರುವ ಶಿವಕುಮಾರಗೌಡ ಪೂರಕ ವಾತಾವರಣ ಸೃಷ್ಢಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ. ಕಳೆದ ಬಾರಿ ಅಧಿಕಾರ ಹಿಡಿದಿದ್ದ ಬಿಜೆಪಿಯ ಬೆಂಬಲಿತರೂ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಅವಿರೋಧ ಆಯ್ಕೆ ಬೆನ್ನಲ್ಲೇ ಆಪರೇಶನ್ ನಡೆಸಿ ಉಮೇಶ ಹೆಬಸೂರ ಬುಟ್ಟಿಗೆ ಹಾಕಿಕೊಂಡಿದ್ದರೂ ಈ ಬಲ ಸಂಖ್ಯಾಬಲ ಕಡಿಮೆಯಾದರೂ ಅಧಿಕಾರ ಹಿಡಿಯಲೇ ಬೇಕೆಂದು ತಮ್ಮದೇ ಆದ ತಂತ್ರಗಾರಿಕೆ ರೂಪಿಸಲು ಮುಂದಾಗಿದ್ದು, ಹಿರಿಯ ಧುರೀಣ ಜಿ.ಪಿ.ಪಾಟೀಲ ಹಾಗೂ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಹೆಸರು ಬಿಜೆಪಿ ಪಾಳೆಯದಲ್ಲಿ ಮುಂಚೂಣಿಯಲ್ಲಿವೆ. ಹಿಂದೆ ಅಧ್ಯಕ್ಷರಾಗಿ, ನಿಸ್ವಾರ್ಥ ದಿಂದ ಬ್ಯಾಂಕಿನ ಪ್ರಗತಿಗೆ ಶ್ರಮಿಸಿದ ದಿ.ಪಿ.ಎಲ್. ಪಾಟೀಲರ ಪುತ್ರರಾದ ಜಿ.ಪಿ.ಪಾಟೀಲ ಈ ಬಾರಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿವ ಯತ್ನ ಮುಂದುವರಿಸಿದರೆ, ಮಲ್ಲಿಕಾರ್ಜುನ ಹೊರಕೇರಿ ಸಹ ತೆರೆಮರೆಯಲ್ಲಿ ಯತ್ನ ನಡೆಸಿದ್ದು ಹೊಂದಾಣಿಕೆ ರಾಜಕಾರಣಕ್ಕೆ ಮುಂದಾದರೂ ಅಚ್ಚರಿಯಿಲ್ಲ.
ವಿಧಾನಸಭಾ ಚುನಾವಣೆಯ ನಂತರ ಉಭಯ ಪಕ್ಷಗಳಿಗೂ ಪ್ರತಿಷ್ಠಿತ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆ ಕೈವಶ ದೊಡ್ಡ ಸವಾಲಾಗಿ ಪರಿಣಮಿಸಿದೆ.