ದಿಂಗಾಲೇಶ್ವರರ ನೇತೃತ್ವದಲ್ಲಿ ಪ್ರತಿಭಟನೆ
ಹುಬ್ಬಳ್ಳಿ : ಚುನಾವಣಾಧಿಕಾರಿಗಳ ಪರವಾನಗಿ ಇಲ್ಲದೇ ಸಭೆ ನಡೆಸುವಂತಿಲ್ಲ. ಸಭೆ ಮೊಟಕುಗೊಳಿಸಿ ಎಂದು ಚುನಾವಣಾಧಿಕಾರಿ, ಪೊಲೀಸ್ ಅಧಿಕಾರಿಗಳು ತಡೆಯೊಡ್ಡಿದ್ದರಿಂದ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನೂರಾರು ಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪಾದಯಾತ್ರೆ ನಡೆಸಿ ಚುನಾವಣಾಧಿಕಾರಿಗಳ ಕ್ರಮವನ್ನು ಖಂಡಿಸಿದರು. ಸುಮಾರು ಎರಡು ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಇದು ಉದ್ದೇಶಪೂರ್ವಕ ಕ್ರಮವಾಗಿದೆ ಎಂದು ದಿಂಗಾಲೇಶ್ವರ ಶ್ರೀ ಆರೋಪಿಸಿದರು.
ದಿಂಗಾಲೇಶ್ವರ ಶ್ರೀಗಳು ರಂಭಾಪುರಿ ಕಲ್ಯಾಣಮಂಟಪದಲ್ಲಿ ಗುರು ವಿರಕ್ತ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆ ಆಯೋಜಿಸಿದ್ದರು. ಸಭೆ ಆರಂಭ ಆಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಬಸವಪ್ರಭು ಹಿರೇಮಠ, ಸಿಪಿಐ ಧರೇಗೌಡ ಸಭೆ ನಡೆಸಲು ಅನುಮತಿ ಪಡೆದಿದ್ದರೆ ತೋರಿಸಿ ಎಂದರು.
ಇದಕ್ಕೆ ನಿನ್ನೆಯಿಂದ ನಾವು ಅನುಮತಿಗೆ ಚುನಾವಣಾಧಿಕಾರಿಗೆ ಪತ್ರ ಬರೆದು ಕೋರಿದ್ದೆ. ಬೆಳಿಗ್ಗೆ ಕೊಡುತ್ತೇವೆ ಎಂದು ಹೇಳಿದವರು ಕೊಟ್ಟಿಲ್ಲ. ಕೊಡದೇ ಇರುವುದು ಅವರ ತಪ್ಪು. ನೂರಾರು ಸ್ವಾಮೀಜಿಗಳು ಬಂದಿದ್ದಾರೆ. ಸಭೆ ನಡೆಸಿಯೇ ತಿರುತ್ತೇವೆ ಎಂದು ದಿಂಗಾಲೇಶ್ವರರು ಪಟ್ಟು ಹಿಡಿದರು.
ಈ ವೇಳೆ ಅಧಿಕಾರಿಗಳ ಕ್ರಮ ಖಂಡಿಸಿದ ಶ್ರೀಗಳು ಮತ್ತು ಇತರ ಸ್ವಾಮೀಜಿಗಳು ಸಭೆ ಮೊಟಕುಗೊಳಿಸಿದರು. ಅನುಮತಿ ನೀಡದೇ ಇರುವ ಚುನಾವಣಾಧಿಕಾರಿಗಳ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸೋಣ ಎಂದು ಚನ್ನಮ್ಮ ವರ್ತುಳದವರೆಗೆ ಪಾದಯಾತ್ರೆ ನಡೆಸಿದರು.