ಮದ್ಯವರ್ತಿಗಳಿಂದ ಸುಲಿಗೆ ಕಾಯಕ
ಧಾರವಾಡ: ಇಲ್ಲಿನ ಉಪ ನೊಂದಣಾಧಿಕಾರಿಗಳ ಕಚೇರಿ ಸಿಬ್ಬಂದಿಯ ಹಣ ದಾಹದ ವಿಷಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚಿತವಾಗುತ್ತಿದೆ.
ಆಸ್ತಿ ನೊಂದಣಿ ವಿಷಯದಲ್ಲಿ ಬಹುಪಾಲು ಹಣ ಪಡೆಯದೇ ಕಚೇರಿ ಸಿಬ್ಬಂದಿ ಸೇವೆ ನೀಡುತ್ತಿಲ್ಲ ಎಂಬುದು ಸಾಮಾನ್ಯ. ಆದರೆ, ವಿವಾಹ ನೊಂದಣಿಯಲ್ಲಿ ಕಚೇರಿ ಸಿಬ್ಬಂದಿ ಕೈ ಬಿಸಿ ಮಾಡದೇ ಸಾರ್ವಜನಿಕರ ಕೆಲಸ ಆಗದಂತಾಗಿದೆ.
ವಿವಾಹ ನೊಂದಣಿಗೆ ಆಗಮಿಸುವವರು ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿದರೂ ಸಿಬ್ಬಂದಿ ನೋಂದಣಿ ಮಾಡಿಕೊಡುತ್ತಿಲ್ಲ. ತಮ್ಮ ಕಚೇರಿ ಆವರಣದಲ್ಲಿ ಸುತ್ತುವ ಮಧ್ಯವರ್ತಿಗಳ ಮೂಲಕ ದಾಖಲೆ ಸಲ್ಲಿಸುವಂತೆ ಸೂಚನೆ ನೀಡುತ್ತಾರೆ.
ನಂತರ ಮಧ್ಯವರ್ತಿಗಳ ಒಪ್ಪಿಗೆ ಪಡೆದು ನೋಂದಣಿ ಮಾಡಿಸುತ್ತಿದ್ದಾರೆ. ನೋಂದಣಿ ಶುಲ್ಕದ ಮೂರ್ನಾಲ್ಕು ಪಟ್ಡು ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಉಪನೋಂದಣಿ ಕಚೇರಿ ಈಗ ಸುದ್ದಿಗೆ ಆಹಾರವಾಗಿದೆ. ಆದರೆ, ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಿದ್ದರೆ ಇಲಾಖೆಯ ಗೌರವಕ್ಕೆ ಧಕ್ಕೆ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ.