ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮತ್ತೆ ಐದು ಓಮಿಕ್ರಾನ್ ಪ್ರಕರಣ ಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
’ಧಾರವಾಡದಲ್ಲಿ 54 ವರ್ಷದ ಮಹಿಳೆಗೆ, ಭದ್ರಾವತಿಯಲ್ಲಿ 20 ವರ್ಷದ ಯುವತಿಗೆ, ಉಡುಪಿಯಲ್ಲಿ 82 ವರ್ಷದ ಪುರುಷ, 72 ವರ್ಷದ ಮಹಿಳೆ ಹಾಗೂ ಮಂಗಳೂರಿನಲ್ಲಿ 19ವರ್ಷದ ಯುವತಿಗೆ ಓವಿಕ್ರಾನ್ ತಗುಲಿದೆ,’ ಎಂಬ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಚಿವರು ಹಂಚಿಕೊಂಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ, ಕರೊನಾ ವೈರಸ್‌ನ ರೂಪಾಂತರ ತಳಿಯಾದ ಓಮಿಕ್ರಾನ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ೧೯ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಈ ವರೆಗೆ ೧೫೧ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಮಹಿಳೆ ಗುಣಮುಖ ಆತಂಕ ಬೇಡ: ಡಿಸಿ
ಸ್ವಯಂಪ್ರೇರಣೆಯಿಂದ ಜಾಗೃತೆ ವಹಿಸಲು ಮನವಿ
ಧಾರವಾಡ: ಜಿಲ್ಲೆಯಲ್ಲಿನ ಪತ್ತೆಯಾದ ಓಮಿಕ್ರಾನ್ ಸೋಂಕಿತ ಪ್ರಕರಣದ ಓರ್ವ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಜನತೆ ಆತಂಕಪಡಬೇಕಿಲ್ಲ. ಆದಾಗ್ಯೂ ಜನತೆ ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ಪಡೆಯುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯದುಕೊಳ್ಳುವುದು ಸೇರಿದಂತೆ ಇನ್ನಿತರ ಜಾಗೃತಿವಹಿಸಬೇಕು ಎಂದರು.
ಕಳೆದ ದಿ.4 ರಂದು ಜ್ವರದಿಂದ ಬಳಲುತ್ತಿದ್ದ ೫೪ ವರ್ಷದ ಮಹಿಳೆಯನ್ನು ಪರೀಕ್ಷಿಸಿಸಿದಾಗ ಓಮೆಕ್ರಾನ್ ಲಕ್ಷಣ ಕಂಡುಬಂದಿತ್ತು. ನಂತರ ಆ ಮಹಿಳೆಯನ್ನು ಹೋಂ ಐಸೋಲೇಶನ್ ಮಾಡಲಾಗಿತ್ತು. ನಿನ್ನೆ ಮತ್ತು ಇಂದು ಮಹಿಳೆಯನ್ನು ಎರಡು ಬಾರಿ ಪರೀಕ್ಷಿಸಿದಾಗ ನೆಗಟಿವ್ ವರದಿಗಳು ಬಂದಿವೆ. ಈಗ ಆ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಆದಾಗ್ಯೂ ಅವರ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿದೆ. ಜೊತೆಗೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿನವರು, ಮನೆಯವರು ಮತ್ತು ಸುತ್ತಲಿನನವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮತ್ತು ಎರಡನೇ ಹಂತದಲ್ಲಿನ ಸಂಪರ್ಕಿತರ ತಪಾಸಣೆ ಕೂಡ ನಡೆಸಲಾಗಿದ್ದು, ಎಲ್ಲವೂ ನೆಗಟಿವ್ ವರದಿ ಬಂದಿವೆ ಎಂದರು.
ಓಮೆಕ್ರಾನ್ ಸೋಂಕಿತ ಪ್ರಕರಣದಲ್ಲಿನ ಮಹಿಳೆ ಸ್ಥಳೀಯವರೇ ಆಗಿದ್ದು, ಹೊರ ದೇಶದಿಂದ ಬಂದವರಲ್ಲ. ಆದರೂ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ನಿಗಾವಹಿಸಿದೆ ಎಂದು ಪಾಟೀಲ ತಿಳಿಸಿದರು.
ಎಸ್‌ಡಿಎಂ ಆಸ್ಪತ್ರೆ ಪ್ರಕರಣದ ಬಳಿಕ ಎಲ್ಲಿಯೂ ಡೆಲ್ಟಾದ ಲಕ್ಷಣಗಳಿದ್ದ ವರದಿಯಾಗಿಲ್ಲ. ಪ್ರತಿದಿನ 4 ಸಾವಿರ ಜನರ ಪರೀಕ್ಷೆ ನಡೆಯುತ್ತಿದ್ದು, ನೆಗಟಿವ್ ಪ್ರಕರಣಗಳು ದಾಖಲಾಗಿಲ್ಲ ಎಂದರು.
ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಸರಕಾರದ ಹೊಸ ಮಾರ್ಗಸೂಚಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಕೊಳ್ಳುತ್ತಿದೆ. ಆದ್ದರಿಂದ ಜಿಲ್ಲೆಯ ಜನರು ಸಧ್ಯಕ್ಕೆ ಯಾವುದೇ ಆತಂಕಕೊಳ್ಳಗಾಗಬಾರದು. ಆದರೆ, ಬರುವ ಜನೇವರಿ ಮತ್ತು ಫೆಬ್ರುವರಿ ತಿಂಗಳಲ್ಲಿ 3 ನೇ ಅಲೆಯ ಅಪಾಯವಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಸ್ವಯಂಪ್ರೇರಣೆಯಿಂದ ಜಾಗೃತಿವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ ಮತ್ತು ಡಾ.ಸುಜಾತಾ ಹಸವಿಮಠ ಸುದ್ದಿಗೋಷ್ಠಿಯಲ್ಲಿದ್ದರು.