ಕುಂದಗೋಳ: ಖ್ಯಾತ ಜಾನಪದ ಕಲಾವಿದ, ಇಂಗಳಗಿ ಗ್ರಾಮರಂಗ ರೂವಾರಿ, ದೊಡ್ಡಾಟ ಕಲೆಯ ಮೂಲಕ ಜನಾನುರಾಗಿಯಾಗಿದ್ದ ವೀರೇಶ ಬಡಿಗೇರ (50) ಬುಧವಾರ ನಿಧನರಾದರು.
ಜಿಲ್ಲೆಯ ಜಾನಪದ ಕಲಾವಿದರಿಗೆ ಅದರಲ್ಲೂ ವಿಶೇಷವಾಗಿ ಯುವ ಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಇಂಗಳಗಿ ಗ್ರಾಮದ ವೀರೇಶ,
ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.
ತಮ್ಮ ಮಧುರ ಕಂಠದಿಂದ ಜಾನಪದ ಗೀತೆಗಳನ್ನು ಕೇಳುವುದೇ ಮಹದಾನಂದ ನೀಡುತ್ತಿತ್ತು.
ಇಂಥ ಯುವ ಕಲಾವಿದ ಇಷ್ಟು ಬೇಗನೆ ಮರೆಯಾಗುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಖ್ಯಾತ ದೊಡ್ಡಾಟ ಕಲಾವಿದ ಮಲ್ಲೇಶ ಮಾಳವಾಡ ದುಖಿಃಸಿದ್ದಾರೆ.ಕುಂದಗೋಳ ಹಾಗೂ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ವೀರೇಶ್ ಬಡಿಗೇರ್ ಅವರ ನೇತೃತ್ವದ ತಂಡ ಜಾನಪದ ಹಾಗೂ ತತ್ವಪದಗಳನ್ನು ತಮ್ಮ ಮಧುರ ಕಂಠದಿಂದ ಹಾಡುತ್ತ ರಂಜಿಸುತ್ತಿದ್ದರು. ಇಂಥ ಯುವ ಕಲಾವಿದನನ್ನು ಕಳೆದುಕೊಂಡ ಗ್ರಾಮರಂಗದ ಬಳಗವೀಗ ಅನಾಥವಾಗಿದೆ.
ಸಂತಾಪ: ವೀರೇಶ ಬಡಿಗೇರ ನಿಧನಕ್ಕೆ ಶ್ರೀ ನೆನಪು ಪೌಂಡೇಶನ್ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೂಡಲಪಾಯ ದೊಡ್ಡಾಟದ ಮೂಲಕ ಜಾನಪದ ಲೋಕದ ನೆನಪಿನಂಗಳದ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರ ನಿಧನದಿಂದ ಜಾನಪದ ಲೋಕ ಬಡವಾಗಿದೆ ಎಂದು ಸಂತಾಪ ಸೂಚಿಸಿದೆ.