ಧಾರವಾಡ : ನಾಡಿನ ಹಿರಿಯ ಜಾನಪದ ಕಲಾವಿದ ಗಾಯಕ, ಸಾವಿರ ಹಾಡಿನ ಸರದಾರ ಎಂದೇ ಕರೆಸಿಕೊಳ್ಳುತ್ತಿದ್ದ ಬಸವಲಿಂಗಯ್ಯ ಹಿರೇಮಠ (65 ) ಅವರು ಇಂದು ಬೆಳಗಿನ ಜಾವ ನಿಧನರಾದರು.
ಕಳೆದ ಕೆಲವು ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಬಸವಲಿಂಗಯ್ಯ ಅವರು ಪತ್ನಿ, ಹೆಸರಾಂತ ರಂಗ ನಿರ್ದೇಶಕಿ, ಕಲಾವಿದೆ ವಿಶ್ವೇಶ್ವರಿ, ಪುತ್ರ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದ ಬಸವಲಿಂಗಯ್ಯ ನೀನಾಸಂ ಶಿಕ್ಷಣ ಪಡೆದು, ಸುಗಮ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ ಹೆಸರು ಮಾಡಿದ್ದರು. ಗ್ರಾಮೀಣ ಪರಿಸರದಲ್ಲಿ ಬೆಳೆದ ಬಸವಲಿಂಗಯ್ಯ ಅವರು, ದೊಡ್ಡಾಟ, ಸಣ್ಣಾಟ, ಪಾರಿಜಾತ ನಾಟಕಗಳನ್ನು ಆಧುನಿಕ ರಂಗಭೂಮಿಗೆ ಪರಿಚಯಿಸಿದರು.ಅಲ್ಲದೇ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಹೊಸ ಪೀಳಿಗೆಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದರು. ಮೈಸೂರು ರಂಗಾಯಣದಲ್ಲಿ ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಜೊತೆ ಗೂಡಿ ಅನೇಕ ನಾಟಕಗಳಿಗೆ ರಂಗಗೀತೆಗಳನ್ನು ಅಳವಡಿಸಿ, ಕಾರಂತರಿಂದ ಶಹಬ್ಬಾಸಗಿರಿ ಪಡೆದಿದ್ದರು.
ಅಮೇರಿಕಾ, ಇಂಗ್ಲೆಂಡ್, ದುಬೈ ಸೇರಿದಂತೆ ವಿಶ್ವ ದ ಇತರ ರಾಷ್ಟ್ರಗಳಲ್ಲಿ ಕೂಡ ಕೃಷ್ಣ ಪಾರಿಜಾತ ಸಣ್ಣಾಟ ಪ್ರದರ್ಶನ ನೀಡಿದ್ದ ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಬಿರುದು ಸನ್ಮಾನಗಳು ಒಲಿದು ಬಂದಿದ್ದವು.
ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ಶ್ರೀ ಕೃಷ್ಣ ಪಾರಿಜಾತ ವನ್ನು ಮೂರು ಗಂಟೆಯಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿ ಸಾವಿರಕ್ಕೂ ಅಧಿಕ ಪ್ರಯೋಗದಿಂದ ಜನ ಮಾನಸದಲ್ಲಿ ಛಾಪು ಮೂಡಿಸಿದ್ದರು.
ಚೆನ್ನಮ್ಮನ ಕಿತ್ತೂರಿನ ಪರಿಸರದಲ್ಲಿ ಹುಟ್ಟಿದ ಬಸವಲಿಂಗಯ್ಯನವರು, ಬಾಲ್ಯದಲ್ಲಿಯೇ ಭಜನೆ, ನಾಟಕ ಇನ್ನಿತರ ಕಲೆಗಳಿಂದ ಆಕರ್ಷಿತರಾಗಿದ್ದರು. ಅವರ ಕಂಠದಿಂದ ’ಹುಲಿಯ ಹುಟ್ಟಿತ್ತೊ ಕಿತ್ತೂರ ನಾಡಾಗ, ಬಂಟ ರಾಯಣ್ಣ ಸಂಗೊಳ್ಳಿ ಊರಾಗ’ ಹಾಡು ಕೇಳುಗರನ್ನು ಕೂಡಲೇ ಸೆಳೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜೀವಾಳವಾದ ಜನಪದವನ್ನು ಅಪಾರ ಪ್ರೀತಿಸುತ್ತಿದ್ದ ಬಸವಲಿಂಗಯ್ಯ, ಜಾನಪದವನ್ನು ಬೆಳೆಸಲು ಸದಾ ಹಂಬಲಿಸುತ್ತಿದ್ದರು. ಆ ಉತ್ಸುಕತೆಯಲ್ಲಿ ಧಾರವಾಡದಲ್ಲಿ ತಮ್ಮದೇ ಆದ ಜಾನಪದ ಸಂಶೋಧನಾ ಕೇಂದ್ರವನ್ನು ಹುಟ್ಟು ಹಾಕಿದ್ದರು. ಅದರ ಮೂಲಕ ಯುವ ಕಲಾವಿದರು, ಯುವ ಸಮೂಹದ ಮುಂದೆ ಜಾನಪದ ಕಲಾ ತರಬೇತಿ ಮಾಡಿ ಸೈ ಎನಿಸಿಕೊಂಡಿದ್ದರು.
ನಂದಭೂಪತಿ, ಶ್ವೇತವೃತ್ತ ಸೇರಿದಂತೆ ಅನೇಕ ನಾಟಕಗಳಿಗೆ ನಿರ್ದೇಶನ ನೀಡಿದ್ದರು. ಬಸವಲಿಂಗಯ್ಯನವರ ನಿರ್ದೇಶನ, ಸಂಗೀತ ಸಂಯೋಜನೆಯಲ್ಲಿ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ವಿನೂತನ ’ಖರೆ ಖರೆ ಸಂಗ್ಯಾಬಾಳ್ಯಾ’ ನಾಟಕ ೨೦ ಕ್ಕೂ ಅಧಿಕ ಪ್ರಯೋಗಗಳನ್ನು ಕಂಡು ಗಮನಸೆಳೆದಿತ್ತು.
ಅವರ ಜಾನಪದ ಗಾಯನ ಕಾರ್ಯಕ್ರಮಗಳು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದ್ದವು. ನಾಡಿನ ಯಾವುದೇ ಕಾರ್ಯಕ್ರಮ, ಸಂಭ್ರಮ ಅಷ್ಟೇ ಅಲ್ಲದೇ ಆತ್ಮೀಯರ ಮಾತಿನ ಮಧ್ಯೆ ನಿಂತಲ್ಲೇ ಹಾಡುತ್ತಿದ್ದ ಕಲಾವಿದ. ವಿಶೇಷವಾಗಿ ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಹಿರಿಯ ಜಾನಪದ ಕಲಾವಿದ ಗಾಯಕ ಬಸವಲಿಂಗಯ್ಯ, ಅವರ ಕಂಚಿನಕಂಠದ ಹಾಡುಗಾರಿಕೆಗೆ ಎಲ್ಲರೂ ತಲೆತೂಗುತ್ತಿದ್ದರು. ಬಸವಲಿಂಗಯ್ಯ ಅವರನ್ನು ಎಲ್ಲರೂ ಸಾವಿರ ಹಾಡಿನ ಸರದಾರ ಎಂದು ಕರೆಯುತ್ತಿದ್ದರು.
ಸಂತಾಪ: ಜಾನಪದ ಕಲಾವಿದ ಗಾಯಕ ಬಸವಲಿಂಗಯ್ಯ ಹಿರೇಮಠರ ನಿಧನಕ್ಕೆ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಾಜಿ ಶಾಸಕ, ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ನ.ವಜ್ರಕುಮಾರ, ವಿತ್ತಾಧಿಕಾರಿ ಡಾ.ಅಜಿತಪ್ರಸಾದ, ಹಿರಿಯ ನ್ಯಾಯವಾದಿಗಳಾದ ಪ್ರಕಾಶ ಉಡಿಕೇರಿ, ಪಿ.ಎಚ್. ನೀರಲಕೇರಿ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ. ಗಣ್ಯರಾದ ತವನಪ್ಪ ಅಷ್ಟಗಿ, ಗುರುರಾಜ ಹುಣಶಿಮರದ, ಡಾ.ಜಿನದತ್ತ ಹಡಗಲಿ, ರಂಗಕರ್ಮಿ ವಿಠ್ಠಲ ಕೊಪ್ಪದ, ಜೀವನ ಶಿಕ್ಷಣ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ, ಸಾಹಿತಿ ಮಾರ್ತಾಂಡಪ್ಪ ಕತ್ತಿ, ಮಹಾವೀರ ಉಪಾದ್ಯೆ, ಡಾ.ಇಸಬೆಲ್ಲ ಝೇವಿಯರ, ಆಯಷಾ ಸೈಯ್ಯದ, ಹಿರಿಯ ಛಾಯಾಗ್ರಾಹಕ ಬಿ.ಎಂ.ಕೇದಾರನಾಥ ಸೇರಿದಂತೆ ಅನೇಕರು ತೀವ್ರ ಸಂತಾಪವ್ಯಕ್ತಪಡಿಸಿದ್ದಾರೆ.
ಸಂಜೆ ಧಾರವಾಡಕ್ಕೆ ಪಾರ್ಥಿವ ಶರೀರ
ಬಸವಲಿಂಗಯ್ಯ ಅವರ ಪಾರ್ಥೀವ ಶರೀರವನ್ನು ತಂದು ಸಪ್ತಾಪುರದಲ್ಲಿರುವ ಸ್ವಗೃಹದಲ್ಲಿ ಸಾಯಂಕಾಲ 6 ರಿಂದ 9 ಗಂಟೆವರೆಗೆ ಸಾರ್ವಜನಿಕ ಪ್ರದರ್ಶನಕ್ಕಾಗಿ ಇಡಲಾಗುವುದು. ನಾಳೆ ಬೆಳಗ್ಗೆ ಅವರ ಸ್ವಗ್ರಾಮ ಬೈಲೂರಲ್ಲಿ ಬೆಳಿಗ್ಗೆ 11-30 ಕ್ಕೆ ಶ್ರೀ ನಿಜಗುಣಾನಂದ ಸ್ವಾಮಿಗಳು ಬೈಲೂರಮಠ ಸಾನಿಧ್ಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬೊಮ್ಮಾಯಿ ಸಂತಾಪ
ಹಿರಿಯ ಜಾನಪದ ಕಲಾವಿದ, ಗಾಯಕ ಬಸಲಿಂಗಯ್ಯ ಹಿರೇಮಠ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸಲಿಂಗಯ್ಯ ಅವರು ಕರ್ನಾಟಕದಲ್ಲಿ ಜಾನಪದ ಕಲೆಯನ್ನು ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ ಜಾನಪದ ಗೀತೆ ಹಾಗೂ ಸಂಗೀತವನ್ನು ಜೀವಂತವಿರಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಹಾಗೂ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಆ ಭಗವಂತ ನೀಡಲಿ ಎಂದು ಕೇಳಿಕೊಳ್ಳು ತ್ತೇನೆ ಎಂದು ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.