ಧಾರವಾಡ: ಬಿ.ವೈ.ವಿಜಯೇಂದ್ರ ದೆಹಲಿ ಭೇಟಿ ವಿಚಾರವಾಗಿ, ನಡ್ಡಾ ಅವರು ವಿಜಯೇಂದ್ರ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂದು ಗೊತ್ತಿಲ್ಲ. ಬೇರೆ ಕಾರಣಕ್ಕೆ ಕೂಡ ಭೇಟಿ ಮಾಡಿರಬಹುದು ಎಂದು ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನು ಯಾರನ್ನೂ ಸಚಿವನಾಗಲು ಭೇಟಿ ಮಾಡಲ್ಲ. ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಈಗಾಗಲೇ ನಾವು ೪ ರಾಜ್ಯಗಳಲ್ಲಿ ಗೆದ್ದಿದ್ದೇವೆ. ಮೋದಿ, ಅಮಿತ್ ಷಾ, ನಡ್ಡಾ ಅವರ ಪರಿಶ್ರಮದಿಂದಾಗಿ ಬಹುಮತದಿಂದ ಗೆದ್ದಿದ್ದೇವೆ. ನಮ್ಮ ಪಕ್ಷದ ನಾಯಕರು ಪ್ರತಿ ಚುನಾವಣೆ ಪ್ಲಾನ್ ಮೂಲಕ ಎದುರಿಸುತ್ತಾರೆ. ನಮ್ಮೆಲ್ಲ ನಾಯಕರೂ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದರು.
ನಮ್ಮ ರಾಜ್ಯದ ಚುನಾವಣೆ ಕೂಡ ಇದೇ ರೀತಿ ಆಗುತ್ತದೆ. ನಮ್ಮ ನಾಯಕರು, ಕಾರ್ಯಕರ್ತರು ಸಮರ ಸನ್ನದ್ಧರಾಗಿದ್ದೇವೆ. 2023ರಲ್ಲಿಯೂ ಬಿಜೆಪಿ ಬಹುಮತದಿಂದ ಗೆಲ್ಲುತ್ತವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಆರ್‌ಟಿಎಸ್ ಹಾಗೂ ಬಿಆರ್‌ಟಿಎಸ್ ರಸ್ತೆಗೆ ಜಾಗ ನೀಡಿದ ಮಾಲೀಕರ ಜಂಟಿ ಸಮೀಕ್ಷೆ ನಂತರ ಪುಟಪಾತ್ ಅತಿಕ್ರಮಣಗೊಂಡಿದ್ದರೆ ತೆರವುಗೊಳಿ ಸಲು ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ. ಗಾಂಧಿ ಚೌಕ್‌ನಿಂದ ಜ್ಯುಬಿಲಿ ಸರ್ಕಲ್‌ವರೆಗಿನ ಬಿಆರ್‌ಟಿಎಸ್‌ನ ರಸ್ತೆ ಎರಡೂ ಬದಿಯ ಫುಟಪಾತ್ ಅತಿಕ್ರಮಣಗೊಂಡಿದ್ದು ಮಾ. 15 ರಂದು ತೆರವು ಕಾರ್‍ಯಾಚರಣೆ ಮಾಡಲು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದರು.
ಈ ಕುರಿತು ಜಾಗದ ಮಾಲೀಕರು ತಮ್ಮ ಬಳಿಯೂ ಬಂದಿದ್ದರು. ಬಿಆರ್‌ಟಿಎಸ್ ಕಾಮಗಾರಿ ಸಂಪೂರ್ಣ ಮುಗಿದ ನಂತರ ಒಂದೂವರೆ ವರ್ಷಗಳ ನಂತರ ನಾವೆಲ್ಲರೂ ಕಂಪೌಂಡ್ ಕಟ್ಟಿಸಿಕೊಂಡಿದ್ದೇವೆ. ಐದು ವರ್ಷಗಳ ನಂತರ ಜಾಗ ಅತಿಕ್ರಮಣಗೊಂಡಿದೆ ಎಂದು ಸಂಸ್ಥೆಯು ನೋಟಿಸ್ ನೀಡಿದೆ ಎಂದು ಸ್ಥಳೀಯರು ತಮಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ಮಾಡಿದ್ದು ಜಂಟಿ ಸಮೀಕ್ಷೆ ನಂತರವೇ ಈ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದು ಈ ಕ್ರಮಕ್ಕೆ ಇಬ್ಬರಿಂದಲೂ ಒಪ್ಪಿಗೆ ದೊರೆತಿದೆ ಎಂದರು.