ಹುಬ್ಬಳ್ಳಿ: ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯದ ಮಾಜಿ ಸಚಿವ, ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ಚುಕ್ಕಾಣಿ ಹಿಡಿದು ಸಮರ್ಥವಾಗಿ ಮುನ್ನಡೆಸಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ (81) ಇಂದು ಮುಂಜಾನೆ ನಿಧನರಾದರು.
ಕಳೆದ ಐದಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಬ್ಬಾರ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ 6.45ಕ್ಕೆ ಕೊನೆಯುಸಿರೆಳೆದರು.
ಮೃತರು ಪತ್ನಿ,ಓರ್ವ ಪುತ್ರ,ಆರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಹುತೇಕ ಜನತೆಯಿಂದ ಪ್ರೀತಿಯಿಂದ ಜನಾಬ್ ಎಂದೇ ಕರೆಸಿಕೊಳ್ಳುತ್ತಿದ್ದ ಹೊನ್ನಳ್ಳಿಯವರು ಪರಿಷತ್ ಸದಸ್ಯರಾಗಿ ಶಕ್ತಿ ಸೌಧಕ್ಕೆ ಕಾಲಿಟ್ಟಿದ್ದರಲ್ಲದೇ 1999 ಹಾಗೂ 2007 ರಲ್ಲಿ ಹಿಂದಿನ ಹುಬ್ಬಳ್ಳಿ ಶಹರ ಕ್ಷೇತ್ರದಿಂದ ಆಯ್ಕೆಯಾಗಿದ್ದರಲ್ಲದೇ ಧರ್ಮ ಸಿಂಗ್ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ನೇರ ನಡೆ ನುಡಿಗೆ ಹೆಸರಾಗಿದ್ದ ಅವರು, ಹುಬ್ಬಳ್ಳಿ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಸಂಸ್ಥೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದರಲ್ಲದೇ 1996 ರಿಂದ ಸುದೀರ್ಘ ಅವಧಿಗೆ ಅಧ್ಯಕ್ಷ, ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಹಿಂದುಳಿದವರು, ಬಡ ಬಗ್ಗರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಹೊನ್ನಳ್ಳಿ ಸೋನಿಯಾ ನಗರ, ಎಸ್ ಎಂ ಕೃಷ್ಣ ನಗರ, ಬೀಡಿ ಕಾರ್ಮಿಕರ ನಗರ ಮುಂತಾದವುಗಳ ನಿರ್ಮಾಣಕ್ಕೆ ಶ್ರಮಿಸಿದ್ದರು.ಅಲ್ಲದೇ ಸಚಿವರಾಗಿದ್ದರೂ ಸರಳತೆಗೆ ಮತ್ತೊಂದು ಹೆಸರಾಗಿದ್ದ ಹೊನ್ನಳ್ಳಿ ಒಮ್ಮೆ ಯಡಿಯೂರಪ್ಪ ಅವರ ಕೆಜೆಪಿ ಪಕ್ಷದ ಬಾಗಿಲನ್ನು ತಟ್ಟಿದ್ದರು.
ಅಂತ್ಯಯಾತ್ರೆ : ಕೇಶ್ವಾಪುರದ ನಿವಾಸದಿಂದ 5.30ಕ್ಕೆ ಹೊನ್ನಳ್ಳಿಯವರ ಪಾರ್ಥಿವ ಶರೀರದ ಯಾತ್ರೆಯು ಹೊರಟು ಸಾಯಂಕಾಲ 7 ಗಂಟೆಗೆ ತೊರವಿ ಹಕ್ಕಲಿನ ಬಡೆ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಸಂತಾಪ : ಮಾಜಿ ಸಚಿವ ಹೊನ್ನಳ್ಳಿ ಅಗಲಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಶ್ರೀನಿವಾಸ ಮಾನೆ, ಸಲೀಂ ಅಹ್ಮದ, ಪ್ರಸಾದ ಅಬ್ಬಯ್ಯ, ಮೇಯರ್ ಈರೇಶ ಅಂಚಟಗೇರಿ, ಮಾಜಿ ಸಚಿವರಾದ ಎ.ಎಂ ಹಿಂಡಸಗೇರಿ, ಸಂತೋಷ ಲಾಡ್, ವಿನಯ ಕುಲಕರ್ಣಿ, ಮಾಜಿ ಹುಡಾ ಅಧ್ಯಕ್ಷ ರಾಜಾ ದೇಸಾಯಿ, ಮುಸ್ಲಿಂ ಸಮುದಾಯದ ಮುಖಂಡ ಶಿರಾಜ ಅಹ್ಮದ ಕುಡಚಿವಾಲೆ, ಕಾಂಗ್ರೆಸ್ ಮುಖಂಡರಾದ ಅರವಿಂದ ಕಟಗಿ, ಲಕ್ಷ್ಮಣ ಚವ್ಹಾಣ, ನೇತಾಜಿ ಕವಳೇಕರ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಲ್ತಾಫ್‌ಹುಸೇನ ಹಳ್ಳೂರ, ಅನಿಲಕುಮಾರ ಪಾಟೀಲ, ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ, ಪಿ.ಎಚ್.ನೀರಲಕೇರಿ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಡಾ.ಶರಣಪ್ಪ ಕೊಟಗಿ, ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಹೊನ್ನಳ್ಳಿ ನಿಧನಕ್ಕೆ ಗಣ್ಯರ ಸಂತಾಪ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಅನುಭವಿ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಏಳಿಗೆಗೆ ಮಹೋನ್ನತ ಕೊಡುಗೆ ನೀಡಿರುವ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ಕರುಣಿ ಸಲಿ ಎಂದು ತಿಳಿಸಿದ್ದಾರೆ.
ಜೆಪಿ ಜಿಲ್ಲಾ ವಕ್ತಾರ ರವಿ ನಾಯಕ, ಖಲಂದರ ಮುಲ್ಲಾ, ಕಾಂಗ್ರೆಸ್ ಮುಖಂಡರಾದ ಸದಾನಂದ ಡಂಗನವರ ಇಸ್ಮಾಯಿಲ್ ತಮಟಗಾರ, ಆರ್.ಕೆ. ಪಾಟೀಲ, ಪಿ.ಎಚ್.ನೀರಲಕೇರಿ, ದೀಪಕ ಚಿಂಚೋರಿ, ಅಲ್ತಾಫ್ ನವಾಜ್ ಕಿತ್ತೂರ, ನವೀದ ಮುಲ್ಲಾ, ಇಮ್ರಾನ್ ಕಡೂರ, ಇಮ್ರಾನ ಯಲಿಗಾರ,ಅಶ್ರಪ್ ಅಲಿ, ರಶೀದ ಬೋಲಾಬಾಯಿ, ರಜತ ಉಳ್ಳಾಗಡ್ಡಿಮಠ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರ, ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು, ಶಿಕ್ಷಣ ಸಮಿತಿ, ಆಸ್ಪತ್ರೆ ಸಮಿತಿ, ಮುತವಲ್ಲಿಗಳು ಹಾಗೂ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಡಚಿವಾಲೆ ಆಗ್ರಹ : ಎಸ್ ಎಂ ಕೃಷ್ಣ ನಗರ, ಸೋನಿಯಾ ನಗರ ಅಲ್ಲದೇ ಬೀಡಿ ಕಾರ್ಮಿಕರ ನಗರದ ನಿರ್ಮಾಣಕ್ಕೆ ವ್ಯಾಪಕವಾಗಿ ಶ್ರಮಿಸಿದ್ದ ಹೊನ್ನಳ್ಳಿಯವರ ಹೆಸರನ್ನು ಬೀಡಿ ಕಾರ್ಮಿಕರ ನಗರಕ್ಕೆ ಇಡಬೇಕೆಂದು ಮುಸ್ಲಿಂ ಸಮುದಾಯದ ಮುಖಂಡ ಶಿರಾಜ ಅಹ್ಮದ ಕುಡಚಿವಾಲೆ ಆಗ್ರಹಿಸಿದ್ದಾರೆ. ಮಹಾನಗರಪಾಲಿಕೆ ಅವರ ಹೆಸರನ್ನು ಇಡುವ ಮೂಲಕ ಶಾಶ್ವತವಾಗಿ ಜನಮನದಲ್ಲಿ ಉಳಿಯುವಂತೆ ಮಾಡಬೇಕೆಂದು ಆಗ್ರಹಸಿದ್ದಾರೆ.