ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಜ್ಯಕ್ಕೆ ನಾಲ್ಕು ಡಿಸಿಎಂ ?

ರಾಜ್ಯಕ್ಕೆ ನಾಲ್ಕು ಡಿಸಿಎಂ ?

ಪಂಚಮಸಾಲಿ ಸಹಿತ ಪ್ರಬಲ ಸಮುದಾಯಕ್ಕೆ ಮಣೆ

ಬೆಂಗಳೂರು : ಏಪ್ರಿಲ್ ತಿಂಗಳ ಮಧ್ಯದಲ್ಲಿ ರಾಜ್ಯ ಸಚಿವ ಸಂಪುಟ ಪುನರ್ರಚನೆ ಬಹುತೇಕ ನಿಶ್ಚಿತವಾಗಿದ್ದು, ಉತ್ತರಪ್ರದೇಶದ ಅಭೂತಪೂರ್ವ ಗೆಲುವಿನ ಗುಂಗಿನಲ್ಲಿರುವ ಕೇಸರಿ ಹೈಕಮಾಂಡ್ ರಾಜ್ಯದಲ್ಲಿ ನಾಲ್ಕು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ 2023ರಲ್ಲಿ ಮತ್ತೆ ಅಧಿಕಾರ ಹಿಡಿಯಲು ತಾಲೀಮು ಆರಂಭಿಸಿದೆ ಎನ್ನಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಏ 1ರಂದು ರಾಜ್ಯಕ್ಕೆ ಆಗಮಿಸಲಿದ್ದು ಅವರು ಪಕ್ಷದ ಮುಖಂಡರು ಹಾಗೂ ಸಂಘ ಪರಿವಾರದ ಪ್ರಮುಖರೊಂದಿಗೆ ಚರ್ಚಿಸಲಿದ್ದು ತದನಂತರ ಸಂಪುಟ ಪುನರ್ರಚನೆಗೆ ಮುಂದಾಗಲಿದ್ದು ಚುನಾವಣೆ ಹೊಸ್ತಿಲಲ್ಲಿ ಹಳಬರನ್ನು ಪಕ್ಷದ ಸಂಘಟನೆಗೆ ಬಳಸಿಕೊಂಡು ಕ್ಲೀನ್ ಇಮೇಜ್ ಇರುವವರಿಗೆ ಅಲ್ಲದೇ ಲಿಂಗಾಯತ ಪಂಚಮಸಾಲಿ, ಹಿಂದುಳಿದ ವರ್ಗ, ಪರಿಶಿಷ್ಠ ಪಂಗಡ, ಹಾಗೂ ಒಕ್ಕಲಿಗರಿಗೆ ಡಿಸಿಎಂ ಪಟ್ಟ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಡಿಸಿಎಂ ಹುದ್ದೆ ಸೃಷ್ಟಿಸಿಲ್ಲವಾಗಿತ್ತು. ಈಗ ಮತ್ತೆ ಪಕ್ಷ ನಿಷ್ಠರಿಗೆ ಹಾಗೂ ದಕ್ಷರಿಗೆ ಮಣೆ ಹಾಕುವದು ನಿಶ್ಚಿತವಾಗಿದ್ದು

ನಾಲ್ವರು ಡಿಸಿಎಂ ಆಗುತ್ತಾರೆಂಬ ಮಾತು ದಟ್ಟವಾಗಿದೆ.ಆರರಿಂದ ಎಂಟು ಸಚಿವರನ್ನು ಬೊಮ್ಮಾಯಿ ಸಂಪುಟದಿಂದ ಕೈ ಬಿಡಲು ಈಗಾಗಲೇ ಹೈಕಮಾಂಡ್ ಚಿಂತನೆ ನಡೆಸಿದೆ.
ಬೊಮ್ಮಾಯಿಯವರು ಲಿಂಗಾಯತ ಸಮುದಾಯದವರಿದ್ದರೂ, ಪ್ರಬಲ ಪಂಚಮಸಾಲಿ ಸಮುದಾಯದವರಿಗೆ ಒಂದು ಡಿಸಿಎಂ ಸ್ಥಾನ ನಿಕ್ಕಿಯಾಗಿದ್ದು ಬಸವರಾಜ ಪಾಟೀಲ ಯತ್ನಾಳರಿಗೆ ಒಲಿಯಲಿದೆ ಎಂಬ ಮಾತು ಪಕ್ಷದ ಆಂತರಿಕ ವಲಯದಲ್ಲಿದ್ದರೂ ಮಾಜಿ ಸಿಎಂ ಯಡಿಯೂರಪ್ಪ ಅಡ್ಡಗಾಲು ಹಾಕುವುದು ನಿಶ್ಚಿತವಾಗಿದೆ. ಪಂಚಮಸಾಲಿ ಕೋಟಾದಲ್ಲಿ ಯತ್ನಾಳ ಬಿಟ್ಟರೆ ದಿಢೀರ್ ಆಗಿ ಸಿಎಂ ರೇಸ್‌ಗೆ ಬಂದಿದ್ದ ಹುಬ್ಬಳ್ಳಿ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹೆಸರೂ ಇದೆ ಎನ್ನಲಾಗುತ್ತಿದೆ.
ಹಿಂದುಳಿದವರ ಕೋಟಾದಡಿ ಹಾಲಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮತ್ತೆ ಮಣೆ ಹಾಕಬೇಕೋ ಅಥವಾ ಸಂಘ ಪರಿವಾರದ ಹಿನ್ನೆಲೆಯ ಕೋಟಾ ಶ್ರೀನಿವಾಸ ಪೂಜಾರಿ, ಪೂರ್ಣಿಮಾ ಶ್ರಿನಿವಾಸ ಇವರಲ್ಲೊಬ್ಬರಿಗೆ ಅವಕಾಶ ನೀಡಬೇಕೆಂಬ ಬಗ್ಗೆ ಚಿಂತನೆ ನಡೆದಿದ್ದು ಸಂಘದ ಹಿನ್ನೆಲೆಯ ಪೂಜಾರಿಗೆ ಹೆಚ್ಚಿನ ಸಾಧ್ಯತೆ ಇದೆ.
ಒಕ್ಕಲಿಗರ ಕೋಟಾದಡಿ ಬಿಜೆಪಿ ಸರ್ಕಾರ ಬರುವಲ್ಲಿ ಪಾತ್ರ ವಹಿಸಿರುವ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಅಥವಾ ಆರ್.ಅಶೋಕ,ಅಶ್ವಥ್ ನಾರಾಯಣ ಹೊರತುಪಡಿಸಿ ಬೆಂಗಳೂರಿನ ಹೊಸಬರೊಬ್ಬರಿಗೆ ದಕ್ಕುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ವಾಲ್ಮೀಕಿ ಸಮುದಾಯದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಜಾಕಪಾಟ್ ನಿಶ್ಚಿತ ಎನ್ನಲಾಗಿದೆ.
ಪ್ರಬಲ, ಹಿಂದುಳಿದ,ಹಾಗೂ ಎಸ್ ಟಿ ಕಾಂಬಿನೇಶನ್ ಮೂಲಕ ಸಿದ್ದರಾಮಯ್ಯ ಅಹಿಂದ ಮಂತ್ರಕ್ಕೆ ತಿರುಗೇಟು ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ವರಿಷ್ಠರು ಮುಂದಾಗಿದ್ದಾರೆನ್ನಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ. ಕರೆ ಬಂದಾಗ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸುತ್ತೇನೆ.                                                                                                                            ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ

administrator

Related Articles

Leave a Reply

Your email address will not be published. Required fields are marked *