ಹುಬ್ಬಳ್ಳಿ: ದೀಪಾವಳಿಯ ವೇಳೆ ಅವಳಿನಗರದಲ್ಲಿ ಮೇರೆ ಮೀರುವುದಲ್ಲದೇ ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಮೂರು ದಿನಗಳ ಕಾಲ ಎಲೆ ತಟ್ಟುವ ಸಪ್ಪಳ ನವನಗರದ ಪೊಲೀಸ್ ಆಯುಕ್ತರ ಕಚೇರಿವರೆಗೆ ಕೇಳುವುದು ಪ್ರತಿ ವರ್ಷ ಕೇಳುತ್ತಿರುವುದು ಹೊಸದೇನಲ್ಲ. ಜೂಜುಕೋರರು ಹಗಲು ರಾತ್ರಿ ಎನ್ನದೇ ಎಕ್ಕಾ ರಾಜಾ ರಾಣಿ ಜಪ ಮಾಡುತ್ತಲೇ ಇರುತ್ತಾರೆ.
ಆದರೆ ಈ ಬಾರಿ ಹಬ್ಬದ ನೆಪದಲ್ಲಿ ಜೂಜಾಟ ಆಡುವವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಇಸ್ಪೀಟ್ ಆಟಕ್ಕೆ ನಿರ್ಬಂಧ ಹೇರಿದ್ದಾರೆ.
ದೀಪಾವಳಿ ಹಬ್ಬದ ಹಿನ್ನಲೆ ಯಾರು ಜೂಜಾಡುವಂತಿಲ್ಲ ಎಂದು ಇದರ ಹೊರತಾಗಿಯೂ ಜೂಜಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಕೇಶ್ವಾಪುರ ಸೇರಿದಂತೆ ಕೆಲ ಠಾಣೆಗಳಲ್ಲಿ ಮೈಕ್ ಮೂಲಕ ಪೊಲೀಸರು ಈ ವಿಚಾರವನ್ನು ಪ್ರಚಾರ ಮಾಡಿದ್ದಾರೆ.
ದೀಪಾವಳಿಯಲ್ಲಿ ಇಸ್ಪೇಟ್ ಆಟವಾಡುವುದು ಅವಳಿನಗರದಲ್ಲಿ ರಾಜ್ಯ ಸರ್ಕಾರವು ಜೂಜಾಟಕ್ಕೆ ಬ್ರೇಕ್ ಹಾಕಲೆಂದು ಕಾನೂನು ತಿದ್ದುಪಡಿ ಮಾಡಿ ಕಠಿಣ ಕಾನೂನು ಕ್ರಮ ರಚಿಸಿದ್ದು, ಆಟದಲ್ಲಿ ಭಾಗಿಯಾದವರ ವಿರುದ್ದ ದಾಖಲಾಗುವ ಪ್ರಕರಣದಲ್ಲಿ ಜಾಮೀನು ಸಿಗುವುದಿಲ್ಲವಾಗಿದೆ.
ಕೇಶ್ವಾಪುರದ ರಸ್ತೆಯಲ್ಲಿರು ಪ್ರತಿಷ್ಠಿತ ಕ್ಲಬ್ ಸಹಿತ ಎಲ್ಲ ಕ್ಲಬ್‌ಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದ್ದು, ಅಲ್ಲದೇ ಬಂಧಿಸಲ್ಪಟ್ಟವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ.
ಹೆಚ್ಚಿನ ಜನರು ಧಾರವಾಡ ಗ್ರಾಮಾಂತರ ವ್ಯಾಪ್ತಿಯ ಫಾರ್ಮ ಹೌಸ್ , ಹಾಗೂ ತಾತ್ಕಾಲಿಕ ಶೆಡ್ ನಿರ್ಮಿಸುವತ್ತ ಮುಂದಾಗಿದ್ದಾರೆನ್ನಲಾಗುತ್ತಿದೆ.
21 ಮಂದಿ ಬಂಧನ
ಹಳೇಹುಬ್ಬಳ್ಳಿಯಲ್ಲಿ ಇನ್ಸಪೆಕ್ಟರ್ ಅಶೋಕ ಚವ್ಹಾಣ ನೇತ್ರತ್ವದಲ್ಲಿ ಕೃಷ್ಣಾ ಕಾಲನಿ ಹಾಗೂ ತಿಮ್ಮ ಸಾಗರ ಓಣಿ ಮುಂತಾದೆಡೆ ದಾಳಿ ನಡೆಸಿ ಒಟ್ಟು ೧೨ ಜನರನ್ನು ಬಂಧಿಸಿದ್ದಾರೆ. ಬೆಂಡಿಗೇರಿ ಇನ್ಸಪೆಕ್ಟರ್ ಶ್ಯಾಮರಾವ ಸಜ್ಜನರ ನೇತ್ರತ್ವದ ತಂಡ ರಾತ್ರಿ ೯ ಜನರನ್ನು ಬಂಧಿಸಿದೆ.
ಮಂತ್ರಿಗಳಿಗೆ ಒತ್ತಡ!
ಕೆಲ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಗಣ್ಯರೇ ಎಲೆ ತಟ್ಟುವುದರಿಂದ ಆಯುಕ್ತರ ಆದೇಶ ಉರುಳಾಗಿ ಪರಿಣಮಿಸಿದ್ದು ಹೇಗಾದರೂ ರಿಲ್ಯಾಕ್ಸ್ ಮಾಡಬೇಕೆಂದು ಮಂತ್ರಿ ಮಹೋದಯರ ಬೆನ್ನು ಹತ್ತಿದ್ದಾರೆನ್ನುವ ಗುಸು ಗುಸು ಕೇಳಿ ಬರುತ್ತದೆ.ಈಗಾಗಲೇ ಕೆಲ ಮದ್ಯವರ್ತಿಗಳು ಸಚಿವರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆನ್ನಲಾಗಿದೆ.