ಚೆನ್ನಮ್ಮ ಮೈದಾನ ಗಜಾನನೋತ್ಸವ ಮಂಡಳಿಯಿಂದ ಮೇಯರ್, ಆಯುಕ್ತರ ಭೇಟಿ
ಹುಬ್ಬಳ್ಳಿ: ನಗರದ ಚೆನ್ನಮ್ಮ ವರ್ತುಳದ ಬಳಿ ಇರುವ ಈದಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಾಳೆ ಸಂಜೆಯೊಳಗೆ ಅನುಮತಿ ನೀಡುವಂತೆ ಕಳೆದ ಬಾರಿ ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿದ್ದ ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳ ಇಂದು ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಹಾಗೂ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿಯವರನ್ನು ಭೇಟಿಯಾಗಿ ವಿನಂತಿಸಿದೆ.
ಮಹಾಮಂಡಳದ ಅಧ್ಯಕ್ಷರಾಗಿರುವ ನ್ಯಾಯವಾದಿ ಸಂಜು ಬಡಸ್ಕರ ನೇತ್ರತ್ವದ ನಿಯೋಗವು ಕಳೆದ ಬಾರಿಗಿಂತ ಹೆಚ್ಚು ವಿಜ್ರಂಭಣೆಯಿಂದ ಆಚರಣೆ ಮಾಡಲು ಉದ್ದೇಶಿಸಲಾಗಿದ್ದು ಸಕಲ ಸಿದ್ಧತೆಗಳನ್ನು ಮಾಡಲು ಕಾಲಾವಕಾಶ ಬೇಕಾಗಿದ್ದು ಹಾಗಾಗಿ ಅನುಮತಿ ನೀಡುವಂತೆ ಆಗ್ರಹಿಸಿದರು.
ಅಲ್ಲದೇ ಕಳೆದ ದಿ. ೩೧ ರಂದು ನಡೆದ ಪಾಲಿಕೆ ಮಾಸಿಕ ಸಭೆಯಲ್ಲಿ ಪಾಲಿಕೆ ಒಡೆತನದ ರಾಣಿ ಚೆನ್ನಮ್ಮ ವೃತ್ತದ ಬಳಿಯ ಜಾಗೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಿಸಲು ಠರಾವು ಪಾಸ್ ಮಾಡಲಾಗಿದ್ದು ಅದರಂತೆ ತಮ್ಮ ಮಹಾಮಂಡಳಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಮೇಯರ್ ಈ ಬಗ್ಗೆ ಆಯುಕ್ತರ ಜತೆ ಚರ್ಚಿಸಿ ನಾಳೆಯೊಳಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ತದನಂತರ ಈದಗಾ ಮೈದಾನಕ್ಕೂ ತೆರಳಿದ ನಿಯೋಗವು ಗಣೇಶ ಸ್ಥಾಪನೆ ಮಾಡುವ ಜಾಗೆಯನ್ನು ಸಹ ಪರಿಶೀಲಿಸಿತು.ಬಡಸ್ಕರ ಅವರೊಂದಿಗೆ ಕಾರ್ಯದರ್ಶಿ ರಘು ಯಲ್ಲಕ್ಕನವರ,ರಮೇಶ ಕದಂ, ವಿಜಯ ಕ್ಷೀರಸಾಗರ ಸಹಿತ ಇತರರು ಇದ್ದರು.
ಈಗಾಗಲೇ ಮಹಾಮಂಡಳವು ಚೆನ್ನಮ್ಮ ಮೈದಾನದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲು ಉದ್ಯಮಿ ಎಂ.ವಿ.ಕರಮರಿ, ನಂದಿನಿ ಕಶ್ಯಪ ಮಜೇಥಿಯಾ,ಕಿಶನ ಬೆಳಗಾವಿ, ಸುಭಾಸಸಿಂಗ ಜಮಾದಾರ, ನವೀನ ಆಕಳವಾಡಿ ಮತ್ತಿತರರನ್ನೊಳಗೊಂಡ ಸ್ವಾಗತ ಸಮಿತಿಯನ್ನೂ ರಚಿಸಿದ್ದು ಪೂರ್ವಭಾವಿ ಸಭೆಯೂ ನಡೆದಿದೆ.
ತನ್ಮಧ್ಯೆ ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ಗುರುನಾಥ ಉಳ್ಳೀಕಾಶಿ,ಚೇತನ ಹಿರೇಕೆರೂರ, ಶ್ರೀನಿವಾಸ ಬೆಳದಡಿ ಮತ್ತಿತರರು ಯಾವುದೇ ಕಾರಣಕ್ಕೂ ಈದಗಾ ಮೈದಾನದಲ್ಲಿ ಗಣೇಶೋತ್ಸವ ಅನುಮತಿ ನೀಡಬಾರದು ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.