ಹುಬ್ಬಳ್ಳಿ-ಧಾರವಾಡ ಸುದ್ದಿ

ಸರ್ಕಾರ ’ಕಾಶ್ಮೀರ್ ಫೈಲ್ಸ್’ ನಿಷೇಧಿಸುವುದು ಸೂಕ್ತ

ಹುಬ್ಬಳ್ಳಿ: ಇತಿಹಾಸದ ಹತ್ಯಾಕಾಂಡಗಳು ವರ್ತಮಾನದ ಹತ್ಯಾಕಾಂಡ ಗಳಿಗೆ ನೆಪವಾಗಬಾರದು. ಬದಲಾಗಿ ಆ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆಯ ಪಾಠವಾಗಬೇಕು. ಸಿನಿಮಾ ಒಂದು ಮನರಂಜನಾ ಉದ್ಯಮ. ಬಣ್ಣದ ಲೋಕ. ಎಷ್ಟೇ ವಾಸ್ತವಕ್ಕೆ ಹತ್ತಿರ ವಿದ್ದರೂ ಅದೊಂದು ಕಾಲ್ಪನಿಕ, ಭಾವನಾತ್ಮಕ ಪ್ರಚೋದನಕಾರಿ ಆಗುವ ಎಲ್ಲಾ ಸಾಧ್ಯತೆಯೂ ಇರುತ್ತದೆ ಎಂದು ಹಿಂದೂ ಮುಸ್ಲಿಂ ಗೆಳೆಯರ ಬಳಗದ ಅಷ್ಪಾಕ ಕುಮಟಾಕರ, ಪ್ರವೀಣ ಕಟ್ಟಿ, ಪುಷ್ಪರಾಜ ಹಳ್ಳಿ ಅವರು ಹೇಳಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುತ್ತಿರುವ ದೇಶಭಕ್ತಿಯ ಉತ್ತುಂಗದಲ್ಲಿರುವ ಜನರು ದುಃಖ ಆಕ್ರೋಶದಿಂದ ಭುಗಿಲೇಳುವ ಮಾತುಗಳನ್ನಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿ, ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಡಾ.ಬಿ.ಆರ್. ಅಂಬೇಡ್ಕರರ ಮಾತುಗಳು ವಾಸ್ತವದಲ್ಲಿ ಸತ್ಯವಾಗಿದೆ. ಇತಿಹಾಸ ವರ್ತಮಾನಕ್ಕೆ ಪಾಠವಾಗಬೇಕೆ ಹೊರತು ಭವಿಷ್ಯಕ್ಕೆ ಮಾರಕವಾಗ ಬಾರದು ಎಂದರು.


ಸಿನಿಮಾ ಒಂದು ಸಿನಿಮಾ ಮಾತ್ರ ಅದು ಒಂದು ಕ್ರಿಯಾತ್ಮಕ ಚಲನಚಿತ್ರ ಮಾತ್ರ. ಅದು ನಿರ್ದೇಶಕನ ಕಲ್ಪನೆಯಲ್ಲಿ ಮೂಡಿದ ಭಾವನೆಗಳು ಮಾತ್ರ. ಅದು ನಿರ್ಮಾಪಕನ ಲಾಭದ ವ್ಯಾಪಾರ ಮಾತ್ರ. ಸಿನಿಮಾ ಪ್ರೇಕ್ಷಕರ ಭ್ರಮೆ ಸೃಷ್ಟಿಸುವ ಒಂದು ಕಲಾ ಮಾಧ್ಯಮ ಮಾತ್ರ. ಸಿನೆಮಾ ರೂಪದ ಭ್ರಮೆ ಆಗುವುದು ಬೇಡ ಎಂದರು.
ಇತಿಹಾಸದ ಹತ್ಯಾಕಾಂಡಗಳನ್ನು ಜಾತಿ ಧರ್ಮ ಪ್ರದೇಶಗಳ ಸಂಕುಚಿತ ಮನೋಭಾವದಿಂದ ನೋಡದೆ ಸ್ವಾತಂತ್ರ್ಯ ಭಾರತದ ಈಗಿನ ಸಂದರ್ಭದಲ್ಲಿ ವಿಶಾಲ ಅರ್ಥದಲ್ಲಿ ನೋಡಿದಾಗ ಮಾತ್ರ ಒಂದು ಸಮಗ್ರ ಚಿಂತನೆ ಮಾಡಲು ಸಾಧ್ಯ. ಈ ನಮ್ಮ ಭಾರತ ನೆಲದಲ್ಲಿ ಕೇವಲ ಕಾಶ್ಮೀರ ಪಂಡಿತರ ಹತ್ಯಾಕಾಂಡ ಮಾತ್ರ ನಡೆದಿಲ್ಲ. ಗೋದ್ರಾ ಘಟನೆ ಮತ್ತು ಆ ಸಮಯದಲ್ಲಿ ಗುಜರಾತಿನ ಮುಸ್ಲಿಮರ ಹತ್ಯಾಕಾಂಡ, ಮುಂಬಯಿಯ ಬಾಂಬ್ ಬ್ಲಾಸ್ಟ್ ಆಂದ್ರ ಪ್ರದೇಶದ ಕರಮಚೇಡು, ಕರ್ನಾಟಕದ ಕಂಬಾಲಪಲ್ಲಿ, ದನವಾಳುವಿನ ದಲಿತ ಕುಟುಂಬಗಳ ಹತ್ಯಾಕಾಂಡ, ಮಹಾರಾಷ್ಟ್ರದ ಖೈರ್ಲಾಜೆ, ಉತ್ತರ ಪ್ರದೇಶದ ಉನ್ನಾವ್ ಮತ್ತು ಇತ್ತೀಚಿನ ರೈತರ ಮೇಲೆ ಜೀಪು ಹತ್ತಿಸಿದ ಲಿಖಿಂಪುರ ಖೇರಿ ಪ್ರಕರಣಗಳು ನಡೆದಿವೆ ಎಂದರು.
ದೇಶದ ಹಿತಾಸಕ್ತಿ ದೃಷ್ಟಿಯಿಂದ ನಾವು ಹೆಚ್ಚು ನಿಯಂತ್ರಿತ ಮನೋಭಾವ ವ್ಯಕ್ತಪಡಿಸಬೇಕು. ಇಂಥ ದ್ವೇಷದ ಸಿನಿಮಾವನ್ನು ಸರಕಾರ ಪ್ರೇರೇಪಿಸುವ ಬದಲು ನಿಷೇಧಿಸುವುದು ಸೂಕ್ತ ಎಂದು ಆಗ್ರಹಿಸಿದರು.

 

administrator

Related Articles

Leave a Reply

Your email address will not be published. Required fields are marked *