ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಾತಿನಿಧ್ಯ ಆದೇಶ ಹೊರಡಿಸಿ
ಹುಬ್ಬಳ್ಳಿ: ಸಿಬಿಎಸ್‌ಇ ಪರೀಕ್ಷಾ ಫಲಿತಾಂಶ ಬರುವ ಮೊದಲೇ ರಾಜ್ಯ ಸರ್ಕಾರದ ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆಯ ಪಾಲಿಟೆಕ್ನಿಕ್, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪ್ರವೇಶ ಕಾಯ್ದಿರಿಸದೇ ಕಾಲೇಜು ಆರಂಭಿಸಲು ಮುಂದಾಗಿರುವ ಕ್ರಮವನ್ನು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ತೀವ್ರವಾಗಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಮತಾ ಸೇನಾದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ರಾಜ್ಯ ಸಿಲೇಬಸ್‌ನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, ತಾಂತ್ರಿಕ ಶಿಕ್ಷಣ ಇಲಾಖೆಯ ಹಲವಾರು ಕಾಲೇಜುಗಳು ಪ್ರವೇಶಾತಿಯನ್ನು ಪೂರ್ಣಗೊಳಿಸಿವೆ. ಸಿಬಿಎಸ್‌ಇ-ಎಸ್‌ಎಸ್‌ಎಲ್‌ಸಿ ವ್ಯಾಸಂಗದ ಪರೀಕ್ಷೆಗಳು ಕಳೆದ ೨೨ಕ್ಕೆ ಮುಕ್ತಾಯಗೊಂಡಿದ್ದು, ಫಲಿತಾಂಶ ಪ್ರಕಟವಾಗಿಲ್ಲ. ಹೀಗಿರುವಾಗ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪ್ರವೇಶ ಕಾಯ್ದಿರಿಸದೇ ಮೊದಲು ಬಂದವರಿಗೆ ಆದ್ಯತೆ ಎಂಬಂತೆ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದರು.
ರಾಜ್ಯ ಮತ್ತು ಕೇಂದ್ರಗಳ ಮಧ್ಯೆ ಶೈಕ್ಷಣಿಕ ಧೋರಣೆ ಏನೇ ಇದ್ದರೂ ಸಿಬಿಎಸ್‌ಇ ವಿದ್ಯಾರ್ಥಿಗಳ ಭವಿಷ್ಯ ಲಕ್ಷ್ಯದಲ್ಲಿಟ್ಟುಕೊಂಡು ಕೂಡಲೇ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ, ತಾಂತ್ರಿಕ ಇಲಾಖೆಯ ಎಲ್ಲ ಸಂಸ್ಥೆಗಳಲ್ಲಿ ತಕ್ಷಣ ಪ್ರವೇಶ ಕಾಯ್ದಿರಿಸಲು ಮುಂದಾಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗುವುದೆಂದು ಉಳ್ಳಿಕಾಶಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಡಬಲ್ ಇಂಜಿನ್ ಸರ್ಕಾರ ಇದ್ದರೂ ಸಹ ಎರಡೂ ಸರಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಿಬಿಎಸ್‌ಇ ವಿದ್ಯಾರ್ಥಿಗಳ ಪಾಲಕರ, ಪೋಷಕರ ಗೋಳು ಯಾರೂ ಕೇಳದಂತಾಗಿದೆ. ಸ್ಥಳೀಯ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಗೂ ಜೆಎಸ್‌ಎಸ್ ಸಂಸ್ಥೆಗಳಲ್ಲಿ ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ದಿ.೮ ರಂದು ಪ್ರವೇಶ ಪಡೆಯಲು ಕೊನೆಯ ದಿನಾಂಕವಾಗಿದ್ದು, ಸಿಬಿಎಸ್‌ಇ ಫಲಿತಾಂಶ ಬರದೇ ಪ್ರವೇಶ ಪೂರ್ಣವಾಗಿದೆ ಎಂದರೆ ಅಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲವೆಂದು ನೇರವಾಗಿ ಹೇಳಿದಂತೆ ಎಂಬುದು ಸರಕಾರಕ್ಕೆ ಗಮನಕ್ಕೆ ಬರದಿರುವುದು ನಿಜಕ್ಕೂ ಸೋಜಿಗವಾಗಿದೆ ಎಂದರು.
ತನ್ಮಧ್ಯೆ ದಿ. 9ರಿಂದ ಪ್ರಥಮ ಪಿಯುಸಿ ಕಾಲೇಜುಗಳ ಆರಂಭಕ್ಕೆ ಸರಕಾರ ಸುತ್ತೋಲೆ ಹೊರಡಿಸಿದ್ದು, ಸಿಬಿಎಸ್‌ಇ ವಿದ್ಯಾರ್ಥಿಗಳ ಫಲಿತಾಂಶದ ಅರಿವೇ ಇಲ್ಲದಂತೆ ವರ್ತಿಸುತ್ತಿರುವುದರ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ. ಅಲ್ಲದೇ ಸರಕಾರ ಉಚಿತ ಶೀಕ್ಷಣ ನೀತಿಯಲ್ಲಿ ಎಲ್‌ಕೆಜಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿವರೆಗೆ ಒಮ್ಮೆ ಸುಲಿಗೆ ಮಾಡಿದರೆ ಪಿಯುಸಿ ಹಂತದಲ್ಲಿ ಲಕ್ಷಾಂತರ ಲೂಟಿಗಿಳಿಯುವ ಶಿಕ್ಷಣ ಸಂಸ್ಥೆಗಳ ವ್ಯಾಪಾರಕ್ಕೆ ಕಡಿವಾಣ ಹಾಕುವ ತಾಕತ್ತು ಸರಕಾರಕ್ಕಿಲ್ಲ ಎಂದು ಹೇಳಿದ್ದಾರೆ.
ದಿ. 09 ರಿಂದ ಕಾಲೇಜುಗಳನ್ನು ಆರಂಭಿಸುವ ದಿನಾಂಕ ಮುಂದೂಡಬೇಕು ಹಾಗೂ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಾತಿನಿಧ್ಯದ ಪ್ರವೇಶದ ಬಗೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಆಗ್ರಹಿಸಿದ್ದಾರಲ್ಲದೇ, ಒಂದು ವೇಳೆ ಇದಾಗದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ರೂಪಿಸಲಾಗುವುದು ಎಂದಿದ್ದಾರೆ. ಗೋಷ್ಠಿಯಲ್ಲಿ ಅಣ್ಣಪ್ಪ ನವಲೂರ, ಅರುಣಕುಮಾರ ಹುದಲಿ, ರಾಜೇಶ ಅಥಣಿ, ರಮೇಶ ಖಟಾವಕರ, ಲೋಹಿತ ಗಾಮನಗಟ್ಟಿ, ಮುಂತಾದವರಿದ್ದರು.