ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಚುನಾವಣೆ
ಅಭಿವೃದ್ಧಿ ಕಾರ್ಯಗಳು ನಮ್ಮ ಜಯಕ್ಕೆ ಕಾರಣ: ಮನೋಹರ ಮೋರೆ
ಧಾರವಾಡ: ಪೇಡೆನಗರಿಯ ಮರಾಠಾ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಚುನಾವಣೆಯಲ್ಲಿ ಮನೋಹರ ಮೋರೆ ತಂಡ ಮತ್ತೊಮ್ಮೆ ಜಯಭೇರಿ ಬಾರಿಸಿರುವ ಮೂಲಕ ಅಧಿಕಾರದ ಗದ್ದುಗೆ ಉಳಿಸಿಕೊಂಡಿದೆ.
ನಿನ್ನೆ ನಡೆದ ಮತದಾನದ ನಂತರ ಮತ ಎಣಿಕೆ ಆರಂಭಗೊಂಡು ತಡರಾತ್ರಿಯವರೆಗೆ ನಡೆಯಿತು. ಗೆಲುವಿನ ನಂತರ
ವಿದ್ಯಾ ಪ್ರಸಾರಕ ಮಂಡಳಿಯ ಕಚೇರಿ ಮುಂದೆ ಜಮಾಯಿಸಿದ ಮನೋಹರ ಮೋರೆ ತಂಡದ ಬೆಂಬಲಿಗರು ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮರಾಠಾ ಪ್ರಸಾರಕ ಮಂಡಳಿಯ ಮತದಾರರು ಮನೋಹರ ಮೋರೆ ತಂಡದ ಕೈ ಹಿಡಿದಿದ್ದು, ಮೂರನೇ ಬಾರಿಗೆ ಎಂ.ಎನ್. ಮೋರೆ ಚುಕ್ಕಾಣಿ ಹಿಡಿದಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪ ಚವ್ಹಾಣ, ಮತ್ತು ನಿರ್ದೇಶಕ ಸ್ಥಾನಗಳಿಗೆ ಈಶ್ವರ ಬಾಬು ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಸ ಪವಾರ, ರಾಜು ಬಿರ್ಜೆನವರ, ಸುಭಾಸ ಶಿಂಧೆ, ದತ್ತಾತ್ರೇಯ ಮೋಟೆ, ಅನಿಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ರಾಜು ಉರ್ಫ ಮಹದೇವ ಕಾಳೆ, ಸುನೀಲ ಮೋರೆ ಮತ್ತು ಪ್ರಸಾದ ಹಂಗಳಕಿ ಆಯ್ಕೆಯಾಗಿದ್ದಾರೆ.
’ಸಮಾಜದ ಸಾಧಕರಿಗೆ ಪ್ರೋತ್ಸಾಹ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ, ಶಾಲಾ-ಕಾಲೇಜುಗಳ ಸಿಬ್ಬಂದಿಗೆ ಸಕಲ ಸೌಲಭ್ಯ, ಮಹಾವಿದ್ಯಾಲಯಕ್ಕೆ ಸುಸಜ್ಜಿತ ಕಟ್ಟಡ, ಅಡಳಿತ ಭವನ ನಿರ್ಮಾಣ, ತುಳಜಾಭವಾನಿ ದೇವಸ್ಥಾನ ಜೀರ್ಣೋದ್ಧಾರ, ಹಳೆಯ ಕಟ್ಟಡಗಳ ಸುಧಾರಣೆ ಹಲವು ಅಭಿವೃದ್ಧಿ ಕಾರ್ಯಗಳು ನಮ್ಮ ಜಯಕ್ಕೆ ಕಾರಣ’ ಎಂದು ಮನೋಹರ ಮೋರೆ ’ಸಂಜೆ ದರ್ಪಣ’ಕ್ಕೆ ತಿಳಿಸಿದರು.
ಮುಂಬರುವ ದಿನಗಳಲ್ಲಿಯೂ ಅನೇಕ ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯ-ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದೇವೆ. ಸಮಾಜದವರು ತಮ್ಮ ಗುಂಪಿನ ಬಗ್ಗೆ ಬೆಂಬಲ ನೀಡಿ ಸಮಾಜದ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.