ಹುಬ್ಬಳ್ಳಿ-ಧಾರವಾಡ ಸುದ್ದಿ

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ಬೊಮ್ಮಾಯಿ ಬದಲಿಗೆ ಕಾಂತೇಶಗೆ ಮಣೆ ?

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಬದಲಾವಣೆ ಆಗಲಿದೆ ಎಂಬ ಚರ್ಚೆ ಮಂಗಳವಾರದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿದಾಡ ತೊಡಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗದ ಸಭೆಗೆ ಕೆ ಎಸ್ ಈಶ್ವರಪ್ಪನವರು ಚಕ್ಕರ ಹೊಡೆದ ನಂತರದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಿದೆ.


ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸುವದಾಗಿ ಘೋಷಿಸಿದ ನಂತರ , ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗುವ ಸಂಭವ ಅರಿತ, ಭಾರತೀಯ ಜನತಾ ಪಕ್ಷದ ಹೈಕಮಾಂಡ, ಹಾವೇರಿ ಕ್ಷೇತ್ರದ ಅಭ್ಯರ್ಥಿಯ ಬದಲಾವಣೆ ಕುರಿತು ಚಿಂತನೆಗೆ ತೊಡಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.


ಪ್ರಸ್ತುತ ಹಾವೇರಿ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಶಿವಕುಮಾರ ಉದಾಸಿ, ತಾನು ಸಕ್ರೀಯ ರಾಜಕಾರಣದಿಂದ ನಿವೃತ್ತನಾಗುವೆ ಎಂದು ಪಕ್ಷಕ್ಕೆ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿದ ನಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದೆರಡು ವರ್ಷಗಳಿಂದ ಈಶ್ವರಪ್ಪನವರ ಮಗ ಕಾಂತೇಶ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಪೂರಕವಾಗಿ ಈ ಕ್ಷೇತ್ರದಲ್ಲಿ ಕುರುಬ ಜನಾಂಗ ಹೆಚ್ಚಿರುವುದು ವರವಾಗಿತ್ತು. ಆದರೆ ಈ ಕ್ಷೇತ್ರದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಘೋಷಣೆಯಾದ ನಂತರ ಈಶ್ವರಪ್ಪ ಸಿಡಿದೆದ್ದು, ಇದಕ್ಕೆಲ್ಲ ಯಡಿಯೂರಪ್ಪ ಅವರೆ ಕಾರಣರೆಂದು ತಾವು ಪಕ್ಷೇತರರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿ, ಯಾವ ಒತ್ತಡಗಳಿಗೂ ಹಾಗೂ ಸಂಧಾನಗಳಿಗೂ ಸೊಪ್ಪು ಹಾಕದೆ ಎದೆ ಸೆಟೆಸಿ ನಿಂತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.


ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿ, ಕಾಂತೇಶಗೆ ಮಣೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈ ಸೂಚನೆ ದೊರೆತಿರುವುದರಿಂದಲೇ ಬೊಮ್ಮಾಯಿಯವರು ನಿನ್ನೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಕ್ಕಿಳಿದಿಲ್ಲ ಎನ್ನಲಾಗುತ್ತಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಇಂತಹ ಸಾಧ್ಯತೆ ಕಡಿಮೆಯಿದ್ದರೂ ಬದಲಾವಣೆಯಾದಲ್ಲಿ ಪವಾಡವೇ ಸರಿ ಎಂಬ ಮಾತು ಕೇಳಿ ಬರಲಾರಂಬಿಸಿದೆ.

administrator

Related Articles

Leave a Reply

Your email address will not be published. Required fields are marked *