ಹುಬ್ಬಳ್ಳಿ-ಧಾರವಾಡ ಸುದ್ದಿ
ಲಾಭೂರಾಮ್ ಖಡಕ್ ಕ್ರಮ: ಹತೋಟಿಗೆ ಬಂದ ಹಳೇಹುಬ್ಬಳ್ಳಿ  ಬಂಧಿತರ ಸಂಖ್ಯೆ 115 ಕ್ಕೇರಿಕೆ

ಲಾಭೂರಾಮ್ ಖಡಕ್ ಕ್ರಮ: ಹತೋಟಿಗೆ ಬಂದ ಹಳೇಹುಬ್ಬಳ್ಳಿ ಬಂಧಿತರ ಸಂಖ್ಯೆ 115 ಕ್ಕೇರಿಕೆ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ನಡೆದ ಗಲಭೆಯಿಂದ ಉದ್ವಿಗ್ನಗೊಂಡಿದ್ದ ನಗರ ಯಥಾಸ್ಥಿತಿಗೆ ಮರಳಿದ್ದು ಬಂಧಿತರ ಸಂಖ್ಯೆ 115 ತಲುಪಿದ್ದು, ಇನ್ನೂ ಹಲವರನ್ನು ವಿಚಾರಣೆ ಮುಂದುವರಿದಿದೆ.


ನಗರದ ದಕ್ಷಿಣ ವಿಭಾಗದ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಿ.೨೩ರವರೆಗೆ ನಿಷೇಧಾಜ್ಞೆ ಮುಂದುವರೆಸಿ ಹು-ಧಾ ಅವಳಿ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.
ಈ ಮೊದಲು 20 ರ ವರೆಗೆ ನಿಷೇಧಾಜ್ಞೆ ಜರಿಗೊಳಿಸ ಲಾಗಿತ್ತು.
ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಪ್ರಕರಣಗಳು ದಾಖಲಾಗಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು ಇದುವರೆಗೆ 115 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ್ ಹೇಳಿದ್ದಾರೆ.
ಸಂಜೆ ವೇಳೆಗೆ ಮತ್ತಷ್ಟು ಗಲಭೆಕೋರರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ 103 ಗಲಭೆಕೋರರನ್ನು ಕಲಬುರ್ಗಿ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಆಯುಕ್ತರ ಕ್ರಮಕ್ಕೆ ಸಲಾಂ!


ಹಳೇ ಹುಬ್ಬಳ್ಳಿಯಲ್ಲಿ ಹನುಮ ಜಯಂತಿಯಂದು ವಾಟ್ಸಾಪ್ ರಾದ್ದಾಂತದ ಹಿನ್ನೆಲೆಯಲ್ಲಿ ಉದ್ಭವಗೊಂಡ ಗಲಭೆ ಇಡೀ ಹುಬ್ಬಳ್ಳಿಗೆ ಹರಡದಂತೆ ಹಾಗೂ ಹತೋಟಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದವರು ಪೊಲೀಸ್ ಆಯುಕ್ತ ಲಾಭೂರಾಮ್.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅವರು ಇಂದಿನವರೆಗೂ ಹಳೆ ಹುಬ್ಬಳ್ಳಿಯ ಠಾಣೆಯಲ್ಲೇ ಮೊಕ್ಕಾಂ ಹೂಡಿ ಎಲ್ಲವನ್ನು ನಿಯಂತ್ರಿಸುತ್ತಿದ್ದಾರೆ.
ತಮ್ಮ ಕಾರಿಗೆ ಉದ್ರಿಕ್ತ ಗುಂಪು ಮುತ್ತಿಗೆ ಹಾಕಿ ಕೈನಿಂದ ಕಾರಿಗೆ ಹೊಡೆಯ ತೊಡಗಿದ್ದರೂ ಸ್ವಲ್ಪವೂ ವಿಚಲಿತಗೊಳ್ಳದೇ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ ಹಾಗೂ ದಕ್ಷಿಣ ಎಸಿಪಿ ಆರ್.ಕೆ.ಪಾಟೀಲ ಇವರು ಸಹ ಆಯುಕ್ತರ ಸನ್ನೆಗಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಿದ ಪರಿಣಾಮ ರಾತ್ರಿ ಭುಗಿಲೆದ್ದ ಹಿಂಸೆ ಬೆಳಗಾಗುವುದರೊಳಗೆ ಎಲ್ಲವೂ ಆಗೇ ಇಲ್ಲವೇನೂ ಎನ್ನುವಂತ ಸ್ಥಿತಿ ನಿರ್ಮಾಣವಾಗಲು ಕಾರಣವಾಯಿತು.

ಸಭೆ ನಡೆಸಿದ್ದ ವಾಸೀಂ?

ಧರ್ಮ ಅವಹೇಳ ಮಾಡಿದವನಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿದ್ದ ಉದ್ರಿಕ್ತ ಗುಂಪು
ದಾಂಧಲೆ ಮಾಡಲು ಮುಂದಾಗುವ ಮೊದಲು ವಾಸೀಮ್ ಪಠಾಣ ಗಣೇಶಪೇಟೆಯಲ್ಲಿ ಕೆಲವರ ಜತೆ ಸಭೆ ನಡೆಸಿ ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದೆಂದು ಹೇಳಿದ್ದ ಎನ್ನಲಾಗಿತ್ತಲ್ಲದೇ ಎಲ್ಲರಿಗೂ ಪ್ರತ್ಯೇಕವಾಗಿ ಹಳೇಹುಬ್ಬಳ್ಳಿ ಕಡೆ ಬರಲು ಸಹ ಹೇಳಿದ್ದ ಎನ್ನಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಿಂದ ವದಂತಿಯನ್ನು ಸಮುದಾಯದ ಬಹುತೇಕ ಜನರಿಗೆ ರವಾನೆ ಮಾಡಿದ್ದರಲ್ಲೂ ಇವನ್ನದೇ ಪಾತ್ರವಿದೆ ಎನ್ನಲಾಗುತ್ತಿದೆ.
ಮನೆಗಳ ಅಂಗಳಕ್ಕೆ ಹಾಕಿದ್ದ ಕಲ್ಲುಗಳನ್ನು ಪುಡಿ ಮಾಡಿ ಕೆಲವರು ತೂರಿದರು

ಕೆಲವರ ಟಾರ್ಗೆಟ್ ಮಾಡುವ ಹುನ್ನಾರ?

ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಕೆಲವರನ್ನು ವ್ಯವಸ್ಥಿತ ವಾಗಿ ಟಾರ್ಗೆಟ್ ಮಾಡುವ ಹುನ್ನಾರ ಸಹ ನಡೆದಿದೆಯೆಂದು ಹೇಳಲಾಗುತ್ತಿದೆ.
ಶನಿವಾರ ರಾತ್ರಿ ತಮ್ಮದೇ ಸಮುದಾಯದ ಉದ್ರಿಕ್ತ ಜನಜಂಗುಳಿ ಹತೋಟಿಗೆ ತರಲು ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಹತೋಟಿಗೆ ತರಲು ಶ್ರಮಿಸಿದ್ದರೂ ಕೆಲವರು ಈ ಬೆಂಕಿಯಲ್ಲೇ ಚಳಿ ಕಾಯಿಸಿಕೊಳ್ಳಲು ಮುಂದಾಗಿದ್ದಾರೆನ್ನಲಾಗುತ್ತಿದೆ.
ಜಿ-23 ಮಾದರಿಯ ಎಚ್- 46 ಗುಂಪು ಮಹಾನಗರ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ ಅವರನ್ನು ಇದೇ ಕಾವಿನ ಬೆಂಕಿಯಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಗುರಿಯಾಗಿಸಿದೆಯೆಂಬ ಮಾತು ಅಲ್ಲಲ್ಲಿ ಬರಲಾರಂಬಿಸಿದೆ.
ಅಲ್ತಾಫ್ ಹಳ್ಳೂರ, ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಪ್ ಸವಣೂರ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಮಾಜಿ ಪಾಲಿಕೆ ಸದಸ್ಯ ಬಶೀರ ಗೂಡಮಾಲ್, ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ, ದಲಿತ ಮುಖಂಡ ಮಾರುತಿ ದೊಡ್ಡಮನಿ ಸಹಿತ ಅನೇಕರು ಪರಿಸ್ಥಿತಿ ನಿಯಂತ್ರಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆನ್ನಲಾಗುತ್ತಿದೆ.

ಅಮಾಯಕರನ್ನು ಬಂಧಿಸಿಲ್ಲ


ಶಿವಮೊಗ್ಗ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಮಾಯಕರನ್ನು ಬಂಧಿಸಲಾಗಿಲ್ಲ, ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣ ಸಂಬಂಧ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ನಂತರ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕ್ರಮ ಕೈಗೊಳ್ಳುವಲ್ಲಿ ಸರ್ಕಾರದ ಕಡೆಯಿಂದ ಯಾವುದೇ ವಿಳಂಬವಾಗಲಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದ್ದು,ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಹತ್ಯೆಗೆ ಸಂಚು : ಪಿ.ಸಿ.ಗಳಿಬ್ಬರಿಂದ ದೂರು

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಗಲಭೆ ನಡೆದ ರಾತ್ರಿ ಕೆಲ ಕಿಡಿಗೇಡಿಗಳು ತಮ್ಮ ಹತ್ಯೆಗೆ ಸಂಚು ರೂಪಿಸಿದ್ದರೆಂದು ಇಬ್ಬರು ಕಾನ್ಸ್‌ಟೇಬಲ್‌ಗಳು ದೂರು ನೀಡಿದ್ದಾರೆ.
ಕಸಬಾಪೇಟೆ ಠಾಣೆಯ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಎಂಬುವವರೇ ತಮ್ಮ ಮೇಲೆ ಸೈಜಗಲ್ಲು ಎತ್ತಿಹಾಕಿ ಹತ್ಯೆ ಮಾಡಲು 10-15 ಜನ ಗಲಭೆಕೋರರು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಣಭಯದಿಂದ ತಾವಿಬ್ಬರು ಅಲ್ಲೇ ಬೈಕ್ ಬಿಟ್ಟು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ.

 

 

administrator

Related Articles

Leave a Reply

Your email address will not be published. Required fields are marked *