ಹುಬ್ಬಳ್ಳಿ-ಧಾರವಾಡ ಸುದ್ದಿ
ಮೇಯರ್, ಉಪಮೇಯರ್ ಚುನಾವಣೆ ತಡೆಗೆ ಕೋರ್ಟ್ ಮೊರೆ

ಮೇಯರ್, ಉಪಮೇಯರ್ ಚುನಾವಣೆ ತಡೆಗೆ ಕೋರ್ಟ್ ಮೊರೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ವಿಂಗಡಣೆ ಮಾಡಿದ್ದ ಸರಕಾರದ ತಿದ್ದುಪಡಿಗೆ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಚುನಾವಣೆ ಮಾಡುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿದೆ. ಇದೀಗ ಮಹಾಪೌರ, ಉಪಮಹಾಪೌರ ಚುನಾವಣೆಗೆ ಮುಂದಾಗಿರುವುದರ ವಿರುದ್ಧ ಹೈಕೋರ್ಟ್‌ಗೆ ಹೋಗಲಾಗುವುದು ಎಂದು ಪಾಲಿಕೆ ಮಾಜಿ ಸದಸ್ಯ ಕಿರಣ ಸಾಂಬ್ರಾಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಜನಸಂಖ್ಯೆ ಅನುಗುಣವಾಗಿ ವಾರ್ಡ್ ವಿಂಗಡಣೆ, ಮೀಸಲಾತಿ ಸೇರಿದಂತೆ ಹಲವು ನೂನ್ಯತೆಗಳನ್ನು ಸರಕಾರ ಮಾಡಿದೆ. ಪ್ರಮುಖವಾಗಿ 2021ರ ಚುನಾವಣೆಗೆ 2011ರ ಜನಗಣತಿ ಪರಿಗಣಿಸಿರುವುದು ನಿಯಮ ಬಾಹಿರ. ಹೀಗಾಗಿ ಬೆಂಗಳೂರು ಹಾಗೂ ವಿಜಯಪುರ ಮಹಾನಗರ ಪಾಲಿಕೆ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಸರಕಾರದ 3ನೇ ತಿದ್ದುಪಡಿಗೆ ತಡೆಯಾಜ್ಞೆ ನೀಡಿದೆ. ಹೀಗಿರುವಾಗ ಬೆಳಗಾವಿ, ಹು-ಧಾ, ಕಲಬುರ್ಗಿ ಪಾಲಿಕೆ ಚುನಾವಣೆ ಮಾಡಿದ್ದರಿಂದ ಸುಪ್ರಿಂ ಕೋರ್ಟ್ ತಡೆಯಾಜ್ಞೆ ಸಂಪುರ್ಣ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಹು-ಧಾ ಪಾಲಿಕೆ ಚುನಾವಣೆ ಕುರಿತಂತೆ ನಾವು ಈ ಮೊದಲೇ ಸಲ್ಲಿಸಿರುವ 5-6 ರಿಟ್ ಅರ್ಜಿಗಳು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಹೀಗಿದ್ದರೂ ಇಲ್ಲಿ ಚುನಾವಣೆ ನಡೆಸಲಾಗಿದೆ. ಇದೀಗ ಮಹಾಪೌರ ಉಪಮಹಾಪೌರ ಚುನಾವಣೆ ನಡೆಸಲು ಮೇ 28ರಂದು ದಿನಾಂಕ ನಿಗದಿ ಮಾಡಿರುವುದು ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತಿದೆ. ಮಹಾಪೌರ ಉಪಮಹಾಪೌರ ಚುನಾವಣೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಸಲ್ಲಿಸಿರುವ ರಿಟ್ ವಿಚಾರಣೆ ಜೂನ್ ೩ರಂದು ನಡೆಯಲಿದೆ. ಆದರೆ ಇದಕ್ಕೂ ಮೊದಲು ಮಹಾಪೌರ ಉಪಮಹಾಪೌರ ಚುನಾವಣೆಗೆ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ನಾವು ಚುನಾವಣೆ ಪೂರ್ವದಲ್ಲಿಯೇ ವಿಚಾರಣೆ ನಡೆಸುವಂತೆ ಕೋರ್ಟ್‌ಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.


ಗೋವಾದಲ್ಲಿನ ಸ್ಥಳೀಯ ಸಂಸ್ಥೆ ಚುನಾವಣೆ ವಾರ್ಡ್ ವಿಂಗಡಣೆಗೆ ಸಂಬಂಧಿಸಿದಂತೆ ಕೆಲವರು ಹೈಕೋರ್ಟ್ ಮೋರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ವಾರ್ಡ್ ವಿಂಗಡಣೆ ಮಾಡುವಲ್ಲಿ ಸರಕಾರ ತಪ್ಪು ಮಾಡಿದೆ ಎಂದು ತೀರ್ಪು ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಗೋವಾ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೈಕೋರ್ಟ್ ವಾದ ಎತ್ತಿ ಹಿಡಿತ್ತು. ಹೀಗಾಗಿ ಇಲ್ಲಿಯೂ ಸಹ ನಾವು ಸಲ್ಲಿಸಿದ ಅರ್ಜಿ ಪರವಾಗಿ ನ್ಯಾಯ ದೊರೆಯಬಹುದು ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಅಲ್ತಾಫ್ ನವಾಜ್ ಕಿತ್ತೂರ, ದಶರಥ ವಾಲಿ, ಸಾಮಾಜಿಕ ಹೋರಾಟಗಾರ ಅನಿಲ ಬೇವಿನಕಟ್ಟಿ, ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ ಭಜಂತ್ರಿ ಇದ್ದರು.

administrator

Related Articles

Leave a Reply

Your email address will not be published. Required fields are marked *