ತಿಂಗಳಾಂತ್ಯ,ಮಾರ್ಚ ಮೊದಲ ವಾರದಲ್ಲಿ ಮುಹೂರ್ತ
ಹುಬ್ಬಳ್ಳಿ : ಚುನಾವಣೆ ನಡೆದು ಫಲಿತಾಂಶ ಬಂದು ನಾಲ್ಕು ತಿಂಗಳುಗಳು ಕಳೆದರೂ ಜನಪ್ರತಿನಿಧಿಗಳ ಆಡಳಿತವಿಲ್ಲದೇ ಬಣಗುಟ್ಟುತ್ತಿರುವ ಮಹಾನಗರಪಾಲಿಕೆಗೆ ತಿಂಗಳಾಂತ್ಯದೊಳಗೆ ಅಥವಾ ಮಾರ್ಚ ಮೊದಲ ವಾರದಲ್ಲಿ ಮೇಯರ್,ಉಪಮೇಯರ್ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ.
ಪಾಲಿಕೆ ಸದಸ್ಯರ ಪ್ರತಿಜ್ಞಾ ವಿಧಿ ಬೋಧನೆ,ಮೇಯರ್ ,ಉಪಮೇಯರ್ ಚುನಾವಣೆ ನಡೆಸುವ ಕುರಿತಂತೆ ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ಇಷ್ಟರಲ್ಲೇ ನಿಯಮಾನುಸಾರ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿವೆ.
ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು
21 ನೇ ಅವಧಿಗೆ ಚುನಾವಣೆ ನಡೆಸುವಂತೆ ಅಧಿಸೂಚನೆಯನ್ನುರಾಜ್ಯ ಸರ್ಕಾರದಿಂದ ಅಧಿಸೂಚನೆ ಪ್ರಕಟವಾಗಿದ್ದರ ಹಿನ್ನೆಲೆಯಲ್ಲಿ ಆಯುಕ್ತರು ಪರಿಷತ್ ಕಾರ್ಯದರ್ಶಿ ಮೂಲಕ ಈಗಾಗಲೇ ಪತ್ರ ಬರೆದಿದ್ದಾರೆ.
ಚೆಂಡು ಈಗ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಂಗಳದಲ್ಲಿದ್ದು ಇಷ್ಟರಲ್ಲೇ ದಿನಾಂಕ ನಿಗದಿಪಡಿಸುವ ಸಾಧ್ಯತೆಗಳಿವೆ.
ಚುನಾವಣೆ ನಡೆಸದಿರುವ ಸರ್ಕಾರದ ಕ್ರಮ ಖಂಡಿಸಿ ಈಗಾಗಲೇ ಕಾಂಗ್ರೆಸ್ ವಿನೂತನ ಪ್ರತಿಭಟನೆಯನ್ನೂ ಸಹ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.
ಸಾಮಾನ್ಯ ಮೀಸಲಾತಿಯನ್ವಯ ಹಿರಿತನದ ಆಧಾರದಲ್ಲಿ ಮಾಜಿ ಮೇಯರ್‌ಗಳಾದ ವೀರಣ್ಣ ಸವಡಿ, (ನಾಲ್ಕನೇ ಬಾರಿಗೆ ಆಯ್ಕೆ) ಶಿವು ಹಿರೇಮಠ, ಉಣಕಲ್ ಪ್ರದೇಶದ ಪ್ರಭಾವಿ ಮುಖಂಡ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ವಿಜಯಾನಂದ ಶೆಟ್ಟಿ, ಉಮೇಶ ಕೌಜಗೇರಿ ಇವರ ಹೆಸರುಗಳು ಸಾಮಾನ್ಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಬರಲಿವೆ.
ಸಾಮಾನ್ಯ ಮೀಸಲಾತಿಯಲ್ಲಿ ಉಳಿದ ಸಮುದಾಯದವರಿಗೂ ಅವಕಾಶ ಇರುವ ಹಿನ್ನೆಲೆಯಲ್ಲಿ ಈರೇಶ ಅಂಚಟಗೇರಿ, ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ ಮುಂತಾದವರು ಸಹ ಈಗ ಮುನ್ನೆಲೆಗೆ ಬಂದಿವೆ.ಧಾರವಾಡಕ್ಕೆ ಈ ಬಾರಿ ನೀಡಬೇಕೆಂಬ ಕೂಗು ಸಹ ಜೋರಾಗಿಯೇ ಎದ್ದಿದ್ದು ಹಲವು ಲೆಕ್ಕಾಚಾರಗಳನ್ನು ಮುಕ್ತವಾಗಿಸಿರುವಂತೆ ಮಾಡಿದೆ.
ಮಹಾನಗರ ಬಿಜೆಪಿಯಲ್ಲಿ ಬಣ ರಾಜಕೀಯ ಈಗ ಕಾಂಗ್ರೆಸ್‌ಗಿಂತ ಹೆಚ್ಚಾಗಿದ್ದರೂ ಅಂತಿಮವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಶಾರೆಯಂತೆ ನಡೆಯುವದು ನಿಶ್ಚಿತವಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.
ತನ್ಮಧ್ಯೆ ಪಾಲಿಕೆಯು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆಯಲು ನಾಳೆ 11 ಗಂಟೆಗೆ ಹುಬ್ಬಳ್ಳಿಯಲ್ಲಿ ಸಂಜೆ 4ಕ್ಕೆ ಸಭೆ ನಡೆಯಲಿದೆ.