ಹುಬ್ಬಳ್ಳಿ-ಧಾರವಾಡ ಸುದ್ದಿ

ಹು.ಧಾ. ಪಾಲಿಕೆ ಮೀಸಲಾತಿ ಬದಲು!; ಹೊಸ ಲೆಕ್ಕಾಚಾರ ಸಾಮಾನ್ಯರಿಗೆ ಮೇಯರ್ ಪಟ್ಟ, ಉಪಮೇಯರ್ ಸಾಮಾನ್ಯ ಮಹಿಳೆಗೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ನೂತನ ಸದಸ್ಯರ ಆಯ್ಕೆಯ ಫಲಿತಾಂಶ ಪ್ರಕಟಗೊಂಡು( ಸೆ.6) 81 ದಿನಗಳು ಕಳೆದರೂ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇನ್ನೂ ನಡೆದಿಲ್ಲವಾಗಿದ್ದು ಹೊಸ ವರ್ಷಕ್ಕೆ ’ಗೌನ ಧರಿಸುವ’ ಭಾಗ್ಯ ನಿಕ್ಕಿ ಎನ್ನುವಂತಾಗಿದೆ.


ಅಲ್ಲದೇ ಈ ಹಿಂದಿನ ಮೀಸಲಾತಿ ಬದಲಾಗಿದ್ದು ಸಾಮಾನ್ಯರಿಗೆ ಮೇಯರ್ ಹಾಗೂ ಸಾಮಾನ್ಯ ಮಹಿಳೆಗೆ ಉಪಮೇಯರ್ ಸ್ಥಾನ ಖಚಿತವಾಗಿದ್ದು ಈಗಾಗಲೇ ಮೂರು ಅವಧಿಯ ಮೀಸಲಾತಿ ಅಂತಿಮಗೊಂಡಿದ್ದು ಅಂತಿಮ ಕೊನೆಯ ಎರಡು ವರ್ಷಗಳದ್ದು ನಿರ್ಧಾರ ಆಗಬೇಕಿದೆ ಎನ್ನಲಾಗುತ್ತಿದೆ.
ಪಾಲಿಕೆಯ ನೂತನ ಸದಸ್ಯರ ಹೆಸರು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ನಂತರ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂತಿಮಗೊಳಿಸಿರುವ ಹೊಸ ಮೀಸಲಾತಿ ಕಡತ ಮುಖ್ಯಮಂತ್ರಿಗಳ ಮುಂದಿದ್ದು ಇಷ್ಟರಲ್ಲೇ ಪ್ರಕಟಗೊಳ್ಳಲಿದೆ ಎಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ.
ಈ ಹಿಂದಿನ ಲೆಕ್ಕಾಚಾರದಂತೆ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಠ ಮಹಿಳೆಗೆ ಮೀಸಲಾಗಿತ್ತು.ಈಗ ಅದು ಬದಲಾಗಿದ್ದು ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ ಲೆಕ್ಕಾಚಾರದ ಅನ್ವಯವೇ ಚುನಾವಣೆ ನಿಶ್ಚಿತ ಎನ್ನಲಾಗಿದೆ.
ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರ ಪರಮಾಪ್ತ ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್, ಉಮೇಶ ಕೌಜಗೇರಿ ಮುಂತಾದವರು ಹೆಸರು ಕೇಳಿ ಬಂದಿದ್ದವಲ್ಲದೇ ಉಪ ಮೇಯರ್ ಪಟ್ಟ ಪಕ್ಷಕ್ಕೆ ಮರು ಸೇರ್ಪಡೆಯಾದ ಯುವ ಮುಖಂಡ ಶಶಿ ಬಿಜವಾಡರ ಪತ್ನಿಯೊಬ್ಬಳೆ ಏಕೈಕ ಎಸ್ ಸಿ ಮಹಿಳೆಯಾದ್ದರಿಂದ ಅವರಿಗೇ ನಿಕ್ಕಿಯಾಗಿತ್ತು. ಈಗ ಮೀಸಲಾತಿ ಬದಲಾಗುತ್ತಿರುವಂತೆಯೇ ಹೊಸ ಲೆಕ್ಕಾಚಾರಗಳು ಕೇಸರಿ ಪಡೆಯಲ್ಲಿ ಆರಂಭಗೊಂಡಿವೆ.


ಸಾಮಾನ್ಯ ಮೀಸಲಾತಿಯನ್ವಯ ಹಿರಿತನದ ಆಧಾರದ ಮೇಲೆ ಈಗಾಗಲೇ ಮೇಯರ್ ಆಗಿ ಅನುಭವವಿರುವ ವೀರಣ್ಣ ಸವಡಿ, (ನಾಲ್ಕನೇ ಬಾರಿಗೆ ಆಯ್ಕೆ) ಅಲ್ಲದೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಥಮ ಪ್ರಜೆಯ ಗಾದಿಯ ಆಳ ಅಗಲ ಬಲ್ಲ ಶಿವು ಹಿರೇಮಠ, ಜೆಡಿಎಸ್‌ನಲ್ಲಿದ್ದು ವಿಪಕ್ಷ ನಾಯಕನ ಸ್ಥಾನ ನಿರ್ವಹಿಸಿರುವ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಮಹಾನಗರದ ಶಾಶ್ವತ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಶೆಟ್ಟಿ, ಉಮೇಶ ಕೌಜಗೇರಿ ಇವರ ಹೆಸರುಗಳು ಮುಂಚೂಣಿಯಲ್ಲಿ ಬರಲಿವೆ.
ಅಲ್ಲದೇ ಸಾಮಾನ್ಯ ಮೀಸಲಾತಿಯಲ್ಲಿ ಉಳಿದವರಿಗೂ ಮುಕ್ತ ಅವಕಾಶವಿದ್ದು ಈರೇಶ ಅಂಚಟಗೇರಿ, ನಾಲ್ಕನೆ ಬಾರಿ ಗೆಲುವು ಸಾಧಿಸಿರುವ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ ಮುಂತಾದವರು ಸಹ ಪರಿಗಣನೆಗೆ ಬರಬಹುದಾಗಿದ್ದು ಅಂತಿಮವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೈ ತೋರಿಸಿದವರಿಗೆ ಪಟ್ಟ ಗ್ಯಾರಂಟಿ ಎನ್ನಬಹುದಾಗಿದೆ.
ಈಗಾಗಲೇ ಮಹಾನಗರ ಜನತೆ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದರೂ ಅಜೀರ್ಣವಾಗುವಷ್ಟು ಬಹುಮತ ನೀಡದೇ ’ಕಪಾಳಮೋಕ್ಷ’ ಮಾಡಿರುವದರಿಂದ ಈ ಬಾರಿಯಾದರೂ ಮೊದಲ ಅವಧಿ ಉತ್ತಮ ಆಡಳಿತ ನೀಡಬೇಕೆಂಬ ಬಗೆಗೂ ಚಿಂತನೆ ನಡೆದಿರುವುದರಿಂದ ಹಿರಿತನಕ್ಕೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.

ಜನವರಿಯಲ್ಲೇ ಅಧಿಕಾರ ಭಾಗ್ಯ

ನೂತನ ಮೀಸಲಾತಿ ಅನುಮೋದನೆಗೊಂಡ ನಂತರ ಪ್ರಾದೇಶಿಕ ಆಯುಕ್ತರಿಗೆ ಪಾಲಿಕೆ ಚುನಾವಣೆ ನಡೆಸುವಂತೆ ಸೂಚಿಸಲಿದ್ದು ತದನಂತರ ಕನಿಷ್ಠ ೨೧ ದಿನಗಳ ಕಾಲಾವಕಾಶ ಇಟ್ಟು ಚುನಾವಣಾ ಪ್ರಕ್ರಿಯೆ ಪ್ರಕಟಗೊಳ್ಳಲಿದೆ.ಡಿ.೧೩ರವರೆಗೆ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು,ತದನಂತರ ಬೆಳಗಾವಿ ಅಧಿವೇಶನ ನಡೆಯಲಿದೆ.ಆ ಕಾರಣದಿಂದ ಸಂಕ್ರಮಣದೊಳಗೆ ಅಥವಾ ೨೦೨೨ರ ಜನವರಿ ಅಂತ್ಯದೊಳಗೆ ಚುನಾಯಿತ ಆಡಳಿತ ಮಂಡಳಿ ಅಧಿಕಾರಕ್ಕೆ ಬರಲಿದೆ.

ಪಕ್ಷೇತರೆ ಅತಂತ್ರ

ಹಿಂದಿನ ಲೆಕ್ಕಾಚಾರದಂತೆ ಯಾವುದೇ ಸಣ್ಣ ಆಸ್ಪದವನ್ನೂ ನೀಡದೇ ಉಪಮೇಯರ್ ಸ್ಥಾನಕ್ಕೆ ಯಾರೊಬ್ಬ ಪರಿಶಿಷ್ಠ ಮಹಿಳೆಯರೂ ಬಿಜೆಪಿಯಲ್ಲಿ ಇಲ್ಲದ್ದರಿಂದ ಕೂಡಲೇ ಬಂಡುಕೋರರಾಗಿ ಗೆಲುವು ಸಾಧಿಸಿದ್ದ ಶಶಿ ಬಿಜವಾಡರ ಪತ್ನಿ ದುರ್ಗಮ್ಮಳನ್ನು ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು.ಈಗ ಸಾಮಾನ್ಯ ಮಹಿಳೆಗೆ ಮೀಸಲಾದ್ದರಿಂದ ಬೇರೊಬ್ಬರ ಪಾಲಾಗುವುದು ನಿಶ್ಚಿತವಾಗಿದ್ದು ಅವರ ಸ್ಥಿತಿ ಅತಂತ್ರವಾಗಿದೆ. ಈಗ ಪಕ್ಷಕ್ಕೆ ಸೇರ್ಪಡೆಯಾದ ಬಿಜವಾಡ ಪತ್ನಿಗೆ ಯಾವ ಸ್ಥಾನ ನೀಡುವರೆಂಬುದು ಕುತೂಹಲ ಕೆರಳಿಸಿದೆ.ಅಲ್ಲದೇ ಬಿಜೆಪಿಯಲ್ಲಿನ ಬಹುತೇಕ ಸಾಮಾನ್ಯ ಮಹಿಳಾ ಸದಸ್ಯರೆಲ್ಲರೂ ಮೊದಲ ಬಾರಿಗೆ ಕಾಲಿಟ್ಟವರಾಗಿದ್ದು ಅವರಲ್ಲೊಬ್ಬರಿಗೆ ಅದೃಷ್ಟ ಖುಲಾಯಿಸಲಿದೆ.
ಹುಬ್ಬಳ್ಳಿಗೆ ಮೇಯರ್ ಪಟ್ಟ ದೊರಕಿದರೆ, ಉಪಮೇಯರ್ ಧಾರವಾಡ ಪಾಲಾಗಲಿದ್ದು, ಧಾರವಾಡಕ್ಕೆ ಪ್ರಥಮ ಪ್ರಜೆ ದಕ್ಕಿದರೆ ಹುಬ್ಬಳ್ಳಿಗೆ ಉಪಮೇಯರ್ ನಿಕ್ಕಿ ಎನ್ನಬಹುದು.
ಇನ್ನೋರ್ವ ಪಕ್ಷೇತರ ಮಹಿಳಾ ಸದಸ್ಯೆಯ ಸೆಳೆಯಲು ಸಹ ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದ್ದು ಈಗಾಗಲೇ ಲೆಕ್ಕಾಚಾರದ ಮಾತುಕತೆಗಳು ಮುಗಿದಿವೆ ಎನ್ನಲಾಗಿದೆ.

ರಾಜಣ್ಣಗೆ ರಹದಾರಿ?
ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಮಾಜಿ ಸಿಎಂ ಶೆಟ್ಟರ್ ವಿರುದ್ದ ಸೆಡ್ಡು ಹೊಡೆದಿದ್ದರೂ ಕೆಲ ತಿಂಗಳುಗಳ ಹಿಂದೆ ಕಮಲ ಕೊಳದೊಳಕ್ಕೆ ಬಂದ ರಾಜಣ್ಣ ಕೊರವಿಯವರಿಗೆ ಮೊದಲ ಅವಧಿಗೆ ಮೇಯರ್ ಮಾಡುವ ಹಾಗೂ ಅವಿರೋಧ ಆಯ್ಕೆ ಮಾಡುವ ಭರವಸೆಯನ್ನು ಬಿಜೆಪಿ ಮುಖಂಡರು ನೀಡಿದ್ದರೆನ್ನಲಾಗಿದೆ.
ಅದೇ ರೀತಿ ಇತ್ತೀಚಿನ ಚುನಾವಣೆಯಲ್ಲಿ ವಾರ್ಡ ನಂ 36ರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಹರ ಸಾಹಸ ಮಾಡಲಾಯಿತಾದರೂ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಜಿದ್ದಿಗೆ ಬಿದ್ದು ಅಭ್ಯರ್ಥಿಯನ್ನು ಉಳಿಸಿಕೊಂಡವಾದರೂ 3371 ಮತಗಳ ದೊಡ್ಡ ಗೆಲುವು ಕೊರವಿಯವರದ್ದಾಗಿತ್ತು. ಹಾಗಾಗಿ ಈಗ ಮೇಯರ್ ಪಟ್ಟ ಅವರಿಗೆ ಕಟ್ಟಲಾಗುವುದೆಂಬ ಗುಸು ಗುಸುವಿಗೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ.
administrator

Related Articles

Leave a Reply

Your email address will not be published. Required fields are marked *