ಸರ್ಕಾರದ ಆದೇಶ ಹೈಕೋರ್ಟಪೀಠದಿಂದ ವಜಾ
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಎ- ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿ ನೇಮಿಸಿದ ಆದೇಶವನ್ನು ಧಾರವಾಡ ಹೈಕೋರ್ಟ ಪೀಠ ವಜಾ ಮಾಡಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಹಜ್ ಮತ್ತುಉ ವಕ್ಫ್ ಇಲಾಖೆಯ ಕಾರ್ಯದರ್ಶಿ ಮುಕ್ತಾರ್ ಪಾಶಾ ಎಚ್ .ಜಿ.ಅವರು ಆದೇಶ ದಿ.15ರಂದು ಹೊರಡಿಸಿ ಬೆಳಗಾವಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಬ್ದುಲ್ ರಶೀದ ಮಿರ್ಜಾನವರ ಅವರನ್ನು ಅಂಜುಮನ್ ಇಸ್ಲಾಂ ಆಡಳಿತಾಧಿಕಾರಿಯಾಗಿ ನೇಮಿಸಿತ್ತು.
ಸಂಸ್ಥೆಯ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ ಹಾಗೂ ಪದಾಧಿಕಾರಿಗಳು ಈ ಆದೇಶ ವಜಾಗೊಳಿಸಬೇಕೆಂದು ಹೈಕೋರ್ಟಗೆ ದಿ.18ರಂದು ಅರ್ಜಿ ಸಲ್ಲಿಸಿದ್ದರು.ಇಂದು ಈ ವಿಷಯ ಹಾಲ್ ನಂ 4ರಲ್ಲಿ ನ್ಯಾಯಾಧೀಶರಾದ ಆರ್.ದೇವದಾಸ ಅವರು ಎದುರು ವಿಚಾರಣೆಗೆ ಬಂದಾಗ ವಾದ ಆಲಿಸಿದ ನಂತರ ಆದೇಶ ವಜಾಗೊಳಿಸಿದರು.
ಅಂಜುಮನ್ ಪರವಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ಪದ್ಮನಾಭ ಮಹಾಲೆ ಹಾಗೂ ಸಾಧಿಕ ಗೂಡವಾಲಾ ವಕಾಲತ್ತು ವಹಿಸಿದ್ದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಕಮೀಟಿಗೆ ಇದೇ ವರ್ಷ ಜೂ.೧೫ರಂದು ಅವಧಿ ಮುಗಿದಿದೆ.ಹೀಗಾಗಿ ಸರ್ಕಾರಕ್ಕೆ ಬಂದ ದೂರು ಪರಿಗಣಿಸಿ ಸಂಸ್ಥೆಗೆ ಮುಂದಿನ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು.
ಕಳೆದ ಎಪ್ರಿಲ್ 25ರಂದು ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ವಕ್ಫ್ ಬೋರ್ಡ ಗೆ ಪತ್ರ ಬರೆದು ಜೂ.15ಗೆ ಅವಧಿ ಮುಗಿಯುವುದರಿಂದ ಚುನಾವಣಾಧಿಕಾರಿ ನೇಮಿಸಿ ಚುನಾವಣಾ ನಡೆಸಲು ಕೋರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಏಕಾಏಕಿ ಆಡಳಿತಾಧಿಕಾರಿ ನೇಮಕ ಸರಿಯಲ್ಲ ಎಂಬುದು ಅಂಜುಮನ್ ಪದಾಧಿಕಾರಿಗಳ ವಾದವಾಗಿತ್ತು. ಆಹಿನ್ನೆಲೆಯಲ್ಲಿಯೇ ಕೋರ್ಟಗೆ ಆದೇಶ ರದ್ದು ಕೋರಿ ಮೆಮೋ ಸಲ್ಲಿಸಲಾಗಿತ್ತು.
ಅಧ್ಯಕ್ಷ ಯೂಸೂಫ್ ಸವಣೂರ, ಉಪಾಧ್ಯಕ್ಷ ಅಲ್ತಾಫ್ ನವಾಜ ಕಿತ್ತೂರ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ ರದ್ದುಗೊಳಿಸಿರುವುದನ್ನು ಖಚಿತ ಪಡಿಸಿದ್ದಾರಲ್ಲದೆ ತಮ್ಮ ಬೇಡಿಕೆಯನ್ನು ಕೋರ್ಟ ಪುರಸ್ಕರಿಸಿದೆ ಎಂದಿದ್ದಾರೆ.