ಹುಬ್ಬಳ್ಳಿ: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ಇತ್ತೀಚಿನ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಗಣೇಶ ಪೇಟದ ಇದಾರ್-ಎ-ಗರೀಬ ನವಾಜ್ ಅಧ್ಯಕ್ಷ ವಸೀಂ ಅಕ್ರಂ ಹಕೀಮ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಮುಸ್ಲಿಂ ಉಲಮಗಳ, ವಿದ್ವಾಂಸರ ಅನಿಸಿಕೆ ಪಡೆಯದೇ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಕಡ್ಡಾಯ ಅಂಶವಲ್ಲ ಎಂಬ ತೀರ್ಪಿನಿಂದ ತುಂಬಾ ನಿರಾಸೆಯಾಗಿದೆ ಎಂದು ಅವರು ತಿಳಿಸಿದರು.
ಎಲ್ಲ ಧರ್ಮಿಯರೂ ತಮ್ಮ ಧರ್ಮವನ್ನು ಪಾಲಿಸಲು ಸಂವಿಧಾನವೂ ಸಹ ಹಕ್ಕನ್ನು ನೀಡಿದೆ. ಸಂವಿಧಾನದ ಅನುಚ್ಛೇದ ೨೫ರ ಪ್ರಕಾರ ಧಾರ್ಮಿಕ ಹಕ್ಕು ಎಲ್ಲ ಭಾರತೀಯರ ಮೂಲಭೂತ ಹಕ್ಕಾಗಿದೆ. ಆದರೆ ರಾಜ್ಯ ಉಚ್ಛ ನ್ಯಾಯಾಲಯ ಹಿಜಾಬ್ ಬಗೆಗೆ ಇತ್ತೀಚಿಗೆ ನೀಡಿರುವ ತೀರ್ಪು ಧಾರ್ಮಿಕ ಹಕ್ಕಿನ ವಿರುದ್ಧವಾಗಿದ್ದು, ಸಮುದಾಯದವರಿಗೆ ತುಂಬ ನೋವುಂಟು ಮಾಡಿದೆ.
ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಮತ್ತು ಪರದಾ ಮಾಡುವುದು ಕಡ್ಡಾಯವಾಗಿದೆ. ಪವಿತ್ರ ಗ್ರಂಥ ಕುರಾನಿನ ಅಲ್ ಅಜಾಬ್ ಅಧ್ಯಾಯದ ೫೯ನೇ ಸೂಕ್ತದಲ್ಲೂ ಇದನ್ನು ಹೇಳಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಹಾಫೀಜ್ ಶಾರೀಕ್ ಅಹ್ಮದ ಪಟೇಲ್, ಸಾದಿಕ್ ಸವಣೂರ, ಮುಂತಾದವರಿದ್ದರು.