ಧಾರವಾಡ: ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಧಿಕಾರದ ಸಲುವಾಗಿ ಇಂದು ಎರಡು ಗುಂಪುಗಳ ಮಧ್ಯೆ ತಿಕ್ಕಾಟ ನಡೆಯಿತು.
ಸಭೆಗೆ 2020 ಜನವರಿಯಲ್ಲಿ ಚುನಾವಣೆ ನಡೆದಿತ್ತು. ನಂತರ ೭೮ ಜನ ಸದಸ್ಯರಿರುವ ಪ್ರಚಾರ ಸಭೆಯನ್ನು ಕೇಂದ್ರ ಸರಕಾರ ಸೂಪರ್ ಸೀಡ್ ಮಾಡಿತ್ತು. ಕಳೆದ ೨೦೨೦ ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿದ್ದ ಹೊಸ ಆಡಳಿತ ಮಂಡಳಿಯನ್ನು ನೇಮಿಸಲಾಗಿತ್ತು. ಈರೇಶ ಅಂಚಟಗೇರಿ ಅಧ್ಯಕ್ಷರಾಗಿ ಮತ್ತು ಅರುಣ ಜೋಶಿ, ಎಂಆರ್.ಪಾಟೀಲ ಸಲಹಾ ಸಮಿತಿ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇವರ ನೇಮಕವನ್ನು ವಿರೋಧಿಸಿ ಪಿ.ವಿ.ಕತ್ತಿಶೆಟ್ಟರ್, ಮಲ್ಲಪ್ಪ ಪುಡಕಲಕಟ್ಟಿ, ರಾಯಪ್ಪ ಪುಡಕಲಕಟ್ಟಿ, ಲಿಂಗರಾಜ ಸರದೇಸಾಯಿ, ಸಮದ ಶೆಟ್ಟಿ, ಮೋಹನ ಸವಣೂರ ಸೇರಿದಂತೆ 13 ಸದಸ್ಯರು ಧಾರವಾಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಸಧ್ಯ ಸಭೆಯ ಆಡಳಿತದಲ್ಲಿರುವ ಅನೇಕರು ಪ್ರಚಾರ ಸಭೆಯ ಸದಸ್ಯರೇ ಅಲ್ಲ. ಹೀಗಾಗಿ ಹಿಂದಿನ ಆಡಳಿತ ಮಂಡಳಿಗೆ ಅಧಿಕಾರ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಹಾಲಿ ಆಡಳಿತ ಮಂಡಳಿಯ ಅಧಿಕಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ನಿನ್ನೆ ಆದೇಶ ಹೊರಡಿಸಿದೆ.
ಇಂದು ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆ ಸಹಿತ ಅರ್ಜಿದಾರರು ತಡೆಯಾಜ್ಞೆಯನ್ನು ಸಭೆಯ ಕಚೇರಿಗೆ ಸಲ್ಲಿಸಲು ಮುಂದಾದರು. ಜೊತೆಗೆ ನ್ಯಾಯಾಲಯದ ಆದೇಶದಂತೆ ಅಧಿಕಾರ ಬಿಡುವಂತೆ ಒಂದು ಪ್ರತಿಪಾದಿಸಲು ಯತ್ನಿಸಲಾಯಿತು.
ಆದರೆ, ಇದಕ್ಕೆ ಒಪ್ಪದ ಹಾಲಿ ಆಡಳಿತ ಮಂಡಳಿ ಸದಸ್ಯರು ಕಚೇರಿಯಲ್ಲಿ ಆದೇಶದ ಪ್ರತಿ ನೀಡುವಂತೆ ಹೇಳಿದರು. ಅಲ್ಲದೇ ಚೆನ್ನೈನಿಂದ ಆದೇಶ ಬಂದ ಬಳಿಕ ಮುಂದಿನ ನಿರ್ಧಾರ ಅಲ್ಲಿಯವರೆಗೆ ನಾವೇನೂ ಹೇಳುವು ದಿಲ್ಲ. ಆದ್ದರಿಂದ ಕಚೇರಿ ನಿಯಮದಂತೆ ಕಚೇರಿಯ ಟಪಾಲು ಕೌಂಟರ್ ನಲ್ಲಿ ಆದೇಶದ ಪ್ರತಿ ನೀಡುವಂತೆ ಸೂಚಿಸಿದರು.
ಆದರೆ, ಇದಕ್ಕೆ ಪಟ್ಟು ಸಡಿಲಿಸದ ಒಂದು ಗುಂಪು ನೀವೇ ಪ್ರತಿ ಪಡೆಯ ಬೇಕು ಎಂದು ಪಟ್ಟು ಹಿಡಿದ ಪರಿಣಾಮ ಪರಸ್ಪರ ವಾಗ್ವಾದ ಆರಂಭ ವಾಯಿತು.ಈ ಹಿನ್ನೆಲೆಯಲ್ಲಿ ಎಸಿಪಿ ಅನುಷಾ ಜಿ., ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಯತ್ನಿಸಿ ದರು. ಆದಾಗ್ಯೂ ಮಧ್ಯಾಹ್ನದವರೆಗೂ ಎರಡೂ ಗುಂಪುಗಳ ಮಧ್ಯೆ ತಿಕ್ಕಾಟ ಮುಂದುವರೆದಿತ್ತು. ಅರ್ಜಿದಾರರ ಪರವಾಗಿ ನ್ಯಾಯವಾದಿ ಗಂಗಾಧರ ಜೆ.ಎಂ. ಅವರು ವಾದ ಮಂಡಿಸಿದ್ದರು.
ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಧಾರವಾಡ ಕಚೇರಿಯ ಅಧ್ಯಕ್ಷರಾಗಿದ್ದರು. ನಂತರದ ದಿನಗಳಲ್ಲಿ ಸಭಾಗೆ ಕೇಂದ್ರ ಸರಕಾರ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಕೆಲವೇ ದಿನಗಳ ಬಳಿಕ ಕೇಂದ್ರ ವಿದೇಶಾಂಗ ಇಲಾಖೆಯ ಹಾಲಿ ರಾಜ್ಯ ಸಚಿವ ವಿ.ಮುರಳೀಧರನ್ ಅಧ್ಯಕ್ಷರಾಗಿ ನೇಮಕವಾಗಿದ್ದರು. ಅವರ ಅಣತಿಯಂತೆ ಧಾರವಾಡ ಕಚೇರಿಗೆ ಬಿಜೆಪಿಯ ಈರೇಶ ಅಂಚಟಗೇರಿ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಅರುಣ ಜೋಶಿ ಮತ್ತು ಎಂ.ಅರ್.ಪಾಟೀಲರನ್ನು ನೇಮಿಸಲಾಗಿತ್ತು.
ಹೀಗಾಗಿ 1918 ರಲ್ಲಿ ಮಹಾತ್ಮಾ ಗಾಂಧಿ ಮತ್ತು ಆನಿಬೆಸಂಟ್ ಅವರಿಂದ ಸ್ಥಾಪಿತವಾದ ಮತ್ತು ಹಲವಾರು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಹೊಂದಿರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಧಿಕಾರ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ.