ಹುಬ್ಬಳ್ಳಿ-ಧಾರವಾಡ ಸುದ್ದಿ
ಶಿಕ್ಷಕರು ನನ್ನ ಕೈ ಬಿಡಲ್ಲ

ಶಿಕ್ಷಕರು ನನ್ನ ಕೈ ಬಿಡಲ್ಲ

ಬಿಜೆಪಿಗರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ

ಎಲ್ಲೆ ಇದ್ದರೂ ಕಳಂಕರಹಿತನಾಗಿ ಇರುವೆ: ಹೊರಟ್ಟಿ

ಹುಬ್ಬಳ್ಳಿ : ಬಹಳ ಆತ್ಮೀಯತೆಯಿಂದ ಬಿಜೆಪಿಗರು ನನ್ನನ್ನು ಬರಮಾಡಿಕೊಂಡಿದ್ದಾರೆ. ಎಲ್ಲರ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆ ಮಾಡುವೆ ಎಂದು ಮಾಜಿ ಸಭಾಪತಿ, ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಬಸವರಾಜ ಹೊರಟ್ಟಿ ಹೇಳಿದರು.
ಕಳೆದೆರಡು ದಿನಗಳ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಹೊರಟ್ಟಿಯವರು ಇಂದು ದೇಶಪಾಂಡೆ ನಗರದ ಕಮಲ ಕಚೇರಿಗೆ ಭೇಟಿ ನೀಡಿದಾಗ ಸ್ವತಃ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ವಾಗತಿಸಿ ಸನ್ಮಾನಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.


ಬಿಜೆಪಿಯ ಅನೇಕ ನಾಯಕರು ಪಕ್ಷ ಸೇರಿವಂತೆ ಒತ್ತಾಯಿಸಿದ್ದರು. ಪಕ್ಷೇತರ ಚುನಾವಣೆ ಎದುರಿಸಬೇಕು ಅಂತ ಕೆಲವರು ಅಭಿಪ್ರಾಯಪಟ್ಟರು. ಎಲ್ಲ ಮತದಾರರ ಒಪ್ಪಿಗೆ ಪಡೆದು ಬಿಜೆಪಿಗೆ ಸೇರಿದೆ ಎಂದರು.
ಸಭಾಪತಿಯಾಗಿ, ಶಾಸಕನಾಗಿ ಮುಂದುವರೆಯಬಹುದಿತ್ತು. ನಾನು ಈವರೆಗೆ ನೈತಿಕತೆ ಇಟ್ಟುಕೊಂಡು ಬಂದವ. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಭಾಪತಿಯೋರ್ವ ರಾಜೀನಾಮೆ ನೀಡಿದ್ದೇನೆ ಎಂದರು.
ಹಲವು ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ರಾಮಕೃಷ್ಣ ಹೆಗಡೆ ಸಾಯುವ ವರೆಗೂ ಅವರ ಜತೆಗೆ ಇದ್ದೆ. ಹಲವು ರಾಜಕೀಯ ಮುಖಂಡರೊಂದಿಗೆ ಒಳ್ಳೆ ಒಡನಾಟ ಹೊಂದಿದ್ದೇನೆ. ಎಲ್ಲೇ ಇದ್ದರೂ ಕಳಂಕರಹಿತನಾಗಿ ಇರುವೆ ಎಂದರು.
23, 24ರಂದು ಕುಟುಂಬ ಸಮೇತ ಹಾಗೂ 26ರಂದು ಬಿಜೆಪಿ ಮುಖಂಡರ ಜತೆ ಸಾರ್ವಜನಿಕರ ಜತೆ ಸೇರಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ ಹೊರಟ್ಟಿ,ಶಿಕ್ಷಕರ ಜತೆ ವೈಯಕ್ತಿಕ ಸಂಬಂಧ ಚನ್ನಾಗಿದೆ. ಅವರು ನನ್ನ ಕೈ ಬಿಡಲ್ಲ. ಜೆಡಿಎಸ್ ನನ್ನನ್ನ ಬೆಳೆಸಿದೆ. ಆ ಬಗ್ಗೆ ಟೀಕೆ ಮಾಡೋದಿಲ್ಲ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ, ಉಭಯ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ಕೆಎಸ್ ಡಿಎಲ್ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಸೆಂಟ್ರಲ್ ಅಧ್ಯಕ್ಷ ಸಂತೋಷ ಚವ್ಹಾಣ, ವಿರೇಶ ಸಂಗಳದ, ವಕ್ತಾರ ರವಿ ನಾಯಕ, ಮಹೇಂದ್ರ ಕೌತಾಳ ಇನ್ನಿತರರಿದ್ದರು.

 

ಸೇರ್ಪಡೆಯಿಂದ ಆನೆಬಲ: ಶೆಟ್ಟರ್

ಹುಬ್ಬಳ್ಳಿ: ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.


ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್ ಅವರು ಜನತಾ ಪರಿವಾರದ ಸಾಕಷ್ಟು ಜನ ಈ ಹಿಂದೆ ಬಿಜೆಪಿ ಸೇರ್ಪಡೆ ಯಾಗಿದ್ದಾರೆ ಎಂದರು.
೨೦೦೮ ರಲ್ಲಿ ಹೊರಟ್ಟಿಯವರಿಗೆ ಯಡಿಯೂರಪ್ಪನವರು ಬಿಜೆಪಿಗೆ ಆಹ್ವಾನ ನೀಡಿದ್ದರು. ಆದ್ರೆ ಜೆಡಿಎಸ್ ಜತೆಗೆ ಒಳ್ಳೆಯ ಸಂಬಂಧ ಇರುವುದರಿಂದ ಅವಾಗ ಬರಲಿಲ್ಲ. ಆದರೂ ಅವಾಗ ನಮ್ಮೊಂದಿಗೆ ಒಳ್ಳೆಯ ಸಂಬಂಧವನ್ನ ಇಟ್ಟುಕೊಂಡಿದ್ದರು ಎಂದರು.
ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವಿಚಾರವಾಗಿ ಪಕ್ಷಭೇದ ಮರೆತು ಹೊರಟ್ಟಿ ಅವರು ನಮಗೆ ಬೆಂಬಲ ನೀಡಿದ್ದರು. ಅವರು ತಮ್ಮದೆ ಆದ ಅಭಿಮಾನಿ ಗಳನ್ನು ಹೊಂದಿದ್ದಾರೆ. ಈಗ ಬಿಜೆಪಿಗೆ ಬಂದಿದ್ದರಿಂದ ನಮಗೆ ಶಕ್ತಿ ಬಂದಿದೆ ಎಂದು ಹೇಳಿದರು.

 

 

administrator

Related Articles

Leave a Reply

Your email address will not be published. Required fields are marked *