ಪೊಲೀಸರ ಕಣ್ಗಾವಲಿನಲ್ಲಿ ಪರಿಸ್ಥಿತಿ
ಹುಬ್ಬಳ್ಳಿ: ಶನಿವಾರ ಹನುಮ ಜಯಂತಿಯಂದು ರಾತ್ರಿ ಭುಗಿಲೆದ್ದ ಹಿಂಸಾಚಾರದಿಂದ ಉದ್ವಿಗ್ನಗೊಂಡಿದ್ದ ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಇಂದು ಹತೋಟಿಗೆ ಬಂದಿದೆಯಾದರೂ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಿದ್ದು, ಇದುವರೆಗೆ ನೂರಾ ಇಪ್ಪತ್ತಕ್ಕು ಹೆಚ್ಚು ಜನರನ್ನು ಬಂಧಿಸಲಾಗಿದ್ದು ಈ ಸಂಖ್ಯೆ 200 ದಾಟುವ ಸಾಧ್ಯತೆಗಳಿವೆ.
ಗಲಾಟೆ ಪ್ರಕರಣಕ್ಕೊಳಗಾದ ಮತ್ತು ಇನ್ನಿತರ ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಕೊಳ್ಳಲಾಗಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಬಂಧಿತ ಗಲಭೆಕೋರರನ್ನು ಪೊಲೀಸರು ಮಧ್ಯಾಹ್ನದ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಅರೋಪಿಗಳನ್ನು ಹಾಜರುಪಡಿಸುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಅಲ್ಲದೇ ನ್ಯಾಯಾಲಯಕ್ಕೆ ಇಂದು ವಿವಾದಿತ ಪೋಸ್ಟ್ ರವಾನಿಸಿದ್ದ ಅಭಿಷೇಕ ಹಿರೇಮಠನನ್ನು ಹಾಜರುಪಡಿಸುವ ಮುನ್ನ ನ್ಯಾಯಾಧೀಶರನ್ನು ಡಿಸಿಪಿ ಗೋಪಾಲ್ ಬ್ಯಾಕೋಡ್ ಭೇಟಿ ಮಾಡಿ ಚರ್ಚಿಸಿದರು.
ಇದೇ ವೇಳೆ ಗಲಭೆಕೋರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೋ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕೋ ಎಂದು
ನ್ಯಾಯಾಧೀಶೆ ಶಕುಂತಲಾ ಕೆ. ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದರು ಎನ್ನಲಾಗಿದೆ.
ಪ್ರಕರಣದ ಗಂಭೀರತೆಯ ಕಾರಣದಿಂದ ನ್ಯಾಯಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ನ್ಯಾಯಾಲಯದ ಸೆಕ್ಯುರಿಟಿ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದರು.
ನ್ಯಾಯಾಲಯಕ್ಕೆ ಅಭಿಷೇಕ
ಹುಬ್ಬಳ್ಳಿ : ವಿವಾದಿತ ಪೋಸ್ಟ್ ಮಾಡಿದ ಆರೋಪಿ ಅಭಿಷೇಕ್ ಹಿರೇಮಠನನ್ನು ಪೊಲೀಸರು ಇಂದು 4ನೇ ಜೆಎಂಎಫ್‌ಸಿ ಎಸಿಜೆ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ಏಪ್ರಿಲ್ 30ರವರೆಗೆ ನ್ಯಾಯಾಂಗದ ವಶಕ್ಕೆ ನೀಡಿದೆ.
ಅಭಿಷೇಕ್ ಪರವಾಗಿ ಹಿಂದು ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ನಾಳೆ ಸರ್ಕಾರಿ ವಕೀಲರು ತಕರಾರು ಅರ್ಜಿ ಸಲ್ಲಿಸುವ ಸಂಭವವಿದೆ.
ಕಾನೂನು ಕ್ರಮ ಶತಸಿದ್ಧ
ಬೆಂಗಳೂರು: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದ ಕೋಮುಗಲಭೆ ಸಂಬಂಧ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಅನೇಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗ ಯಾರು ಬಂಧನಕ್ಕೆ ಒಳಗಾಗಿದ್ದಾರೋ ಅವರೆಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸುವುದು ಶತಸಿದ್ದ ಎಂದರು.
ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿರುವುದು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದವರನ್ನು ಬಂಧಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಪ್ರಕಾರವೇ ಕ್ರಮ ಜರುಗಿಸುತ್ತೇವೆ ಎಂದರು.
ಈಗಾಗಲೇ ಪೊಲೀಸರು ತನಿಖಾ ತಂಡವನ್ನು ರಚಿಸಿ ತಲೆಮರೆಸಿಕೊಂಡಿ ರುವ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಯಾವುದೇ ಸಂಘಟನೆಗಳಿರಲಿ, ಯಾರೇ ಇರಲಿ, ತಪ್ಪಿತಸ್ಥರು ಕಾನೂನು ಪ್ರಕಾರ ಶಿಕ್ಷೆಗೆ ಅರ್ಹರು. ಪೊಲೀಸರು ಅದನ್ನು ಮಾಡುತ್ತಾರೆ ಎಂದು ಸಿಎಂ ಹೇಳಿದರು.
ಹುಬ್ಬಳ್ಳಿ ಮರ್ಯಾದೆ ಕಳೆಯಬಾರದು
ಹುಬ್ಬಳ್ಳಿ: ಇಲ್ಲಿಯವರೆಗೆ ಹುಬ್ಬಳ್ಳಿ ಬಹಳ ಶಾಂತ ರೀತಿಯಲ್ಲಿದೆ. ಹಿಂದಿನ ದಿನಗಳು ಮತ್ತೆ ಮರುಕಳಿಸಬಾರದು. ರಾಜ್ಯದಲ್ಲಿ ಹುಬ್ಬಳ್ಳಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬಾರದು. ಇದಕ್ಕೆ ಎಲ್ಲಾ ನಾಗರಿಕರು ಸಹಕರಿಸಬೇಕು. ಪ್ರತಿಯೊಬ್ಬರು ನಮ್ಮೂರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಊರಿನ ಅಭಿಮಾನ ಬೆಳೆಸಿಕೊಳ್ಳಬೇಕು. ನಗರದ ಮರ್ಯಾದೆ ಕಳೆಯಬಾರದು ಎಂಬುದು ಎಲ್ಲರ ಮನಸ್ಸಿನಲ್ಲಿ ಬರಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಒಡಕು ಮೂಡಿ, ಪ್ರಾಣಹಾನಿ ಮಾಡಿ ಹಾಗೂ ಆಸ್ತಿ ಹಾನಿ ಆಗಬಾರದು. ಆ ದೃಷ್ಠಿಯಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಗಲಭೆ ಕುರಿತು ಈಗಾಗಲೇ ಪೋಲಿಸ್ ಕಮಿಷನರ್ ಜೊತೆ ಮಾತನಾಡಿ ದ್ದೇನೆ. ಯಾರು ತಪ್ಪು ಮಾಡಿದ್ದಾರೊ ಅವರ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕು. ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದೇನೆ ಎಂದು ಹೊರಟ್ಟಿ ತಿಳಿಸಿದರು.
ಸಲಿಂ ಅಹ್ಮದ ನೇತೃತ್ವದ ನಿಯೋಗದಿಂದ ಆಯುಕ್ತರ ಭೇಟಿ
ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಪರಿಷತ್ ಸದಸ್ಯ ಸಲೀಂ ಅಹ್ಮದ ನೇತೃತ್ವದ ನಿಯೋಗ ಇಂದು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿತು.
ನಗರದಲ್ಲಿನ ಪೊಲೀಸ್ ಕಮಿಷನ್‌ರ ಕಚೇರಿಗೆ ತೆರಳಿದ ಕಾಂಗ್ರೆಸ್ ಮುಖಂಡರು ಆಯುಕ್ತ ಲಾಬೂರಾಮ್ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಚರ್ಚೆ ನಡೆಸಿದರು.
ಪ್ರಕರಣ ಸಂಬಂಧ ಅಮಾಯಕರ ಬಂಧನವಾಗುತ್ತಿದೆ. ಯಾವುದೇ ಕಾರಣಕ್ಕೂ ಅಮಾಯಕರನ್ನು ಬಂಧಿಸಬೇಡಿ, ಘಟನೆಯಲ್ಲಿ ಭಾಗಿಯಾದವರನ್ನು ಮಾತ್ರ ಬಂಧಿಸಿ ಎಂದು ಮನವಿ ಮಾಡಿದರು.
ನಿಯೋಗದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನೀಲ್ ಪಾಟೀಲ್, ಅಲ್ತಾಫಹುಸೇನ ಹಳ್ಳೂರ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಅಂಜುಮನ್ ಇಸ್ಲಾಂ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸಮನಿ ಇನ್ನಿತರರಿದ್ದರು.
ನಗರ ಸೇರಿದಂತೆ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿದೆ. ಕೆಲ ಕಿಡಿಗೇಡಿಗಳು ಜಾತಿ ಧರ್ಮದ ಹೆಸರಿನಲ್ಲಿ ಇಂತಹ ಕುಕೃತ್ಯ ಮಾಡುತ್ತಿದ್ದಾರೆ. ತಪ್ಪಿತಸ್ಥರರಿಗೆ ಕಠಿಣ ಶಿಕ್ಷೆ ಕೊಡಬೇಕು. ಜೊತೆಗೆ ಇಂತಹ ಕೃತ್ಯಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಆಗಬೇಕು ಎಂದು ಸಲೀಂ ಅಹ್ಮದ ಇದೇ ವೇಳೆ ಆಗ್ರಹಿಸಿದರು.