ಬೂದಿಮುಚಿದ ಕೆಂಡದ ಸ್ಥಿತಿ: 20ರವರೆಗೆ ನಿಷೇಧಾಜ್ಞೆ
ಹುಬ್ಬಳ್ಳಿ: ತಡರಾತ್ರಿ ಏಕಾಏಕಿ ನಡೆದ ಕೋಮುಗಲಭೆಗೆ ಹುಬ್ಬಳ್ಳಿ ಜನ ಬೆಚ್ಚಿಬಿದ್ದಿದ್ದಾರೆ. ಕಂಡಕಂಡಲ್ಲಿ ನಡೆದ ಕಲ್ಲು ತೂರಾಟ, ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಪೊಲೀಸ್ ವಾಹನಗಳು ಕೂಡ ಜಖಂ ಆಗಿವೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಿಡಿಗೇಡಿಯೊಬ್ಬ ಪ್ರಾರ್ಥನ ಸ್ಥಳವೊಂದರ ಬಗ್ಗೆ ವಿವಾದಿತ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಈ ಉದ್ರಿಕ್ತ ವಾತಾವರಣ ಉಂಟಾಗಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪೊಲೀಸ್ ವಾಹನಗಳು ಜಖಂಗೊಳಿಸಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಕಾಡದೇವರ ಮಠ, ಕಾನ್‌ಸ್ಟೆಬಲ್ ಗುರುಪಾದಪ್ಪ ಸಾದ್ವಿ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಪೊಲೀಸ್ ವಾಹನಗಳು ಸಂಪೂರ್ಣ ಜಖಂಗೊಂಡಿವೆ.
ಶನಿವಾರ ರಾತ್ರಿ ಏಕಾಏಕಿ ಒಂದು ಕೋಮಿನ ನೂರಾರು ಜನರು ಬೀದಿ ಗಿಳಿದು ಪೊಲೀಸ್ ವಾಹನ, ಆಸ್ಪತ್ರೆ, ದೇವಸ್ಥಾನ, ಅಂಗಡಿ, ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೀದಿದೀಪಗಳನ್ನು ಹೊಡೆದು ಹಾಕಿದ್ದಾರೆ. ಕಾಂಗ್ರೆಸ್ ಮುಖಂಡ, ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಬ್ಬಳ್ಳಿ ಅಕ್ಷರಸಃ ರಣರಂಗವಾಗಿ ಮಾರ್ಪಾಡಾಗಿದೆ.
ವಿಡಿಯೋ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಅಭಿಷೇಕ್ ಹಿರೇಮಠ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕಲ್ಲು ತೂರಾಟ ನಡೆಸಿದ ೪೦ ಜನರನ್ನು ಬಂಸಲಾಗಿದೆ. ನಿನ್ನೆ ರಾತ್ರಿ ವಿವಾದಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಷಯ ತಿಳಿಯುತ್ತಲೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಒಂದು ಕೋಮಿನವರು ಗಲಾಟೆ ಮಾಡಲು ಮುಂದಾದರು.
ಆಕ್ರೋಶಗೊಂಡು ಕಲ್ಲು ತೂರಾಟ ಪ್ರಾರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಗಾಳಿಯಲ್ಲಿ ಗುಂಡು ಹಾರಿಸಿ ಗಲಾಟೆ ತಡೆಯಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.ಪೊಲೀಸರು ಹುಬ್ಬಳ್ಳಿ-ಕಾರವಾರ ರಸ್ತೆಯನ್ನು ಬಂದ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಜನರ ಗುಂಪು ಅಲ್ಲಲ್ಲಿ ಸೇರಿದ್ದು, ಬಿಗುವಿನ ವಾತಾವರಣ ಮುಂದುವರೆದಿದೆ.
ಪೊಲೀಸ್ ಆಯುಕ್ತರಾದ ಲಾಬುರಾಮ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ತಡರಾತ್ರಿವರೆಗೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಮುಸ್ಲಿಂ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸಿದರು. ಘಟನೆ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಾಳೆ ಬೇರೆ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕರೆಸಿಕೊಳ್ಳಲು ಇಲಾಖೆ ನಿರ್ಧರಿಸಿದೆ.
ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲು ಇಲಾಖೆ ಮುಂದಾಗಿದೆ. ಭಾನುವಾರ ರಜೆ ಮೇಲೆ ಹೋದ ಸಿಬ್ಬಂದಿಗೆ ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗಿದೆ.
ರಂಜಾನ್ ಮಾಸದಲ್ಲಿನ ಘಟನೆ ಬೇಸರ ತಂದಿದೆ
ಹುಬ್ಬಳ್ಳಿ: ಹಿಂಸಾಚಾರಕ್ಕೆ ಇಸ್ಲಾಂ ಯಾವತ್ತೂ ಕುಮ್ಮಕ್ಕು ನೀಡಲ್ಲ. ಕಲ್ಲು ತೂರಾಟ ನಡೆಸಿದ್ದು ತಪ್ಪು. ಆರೋಪಿಗಳ ವಿರುದ್ಧ ಕಠಿಣಕ್ರಮಕ್ಕೆ ತಾವು ಆಗ್ರಹಿಸುವುದಾಗಿ ಅಂಜುಮನ್ ಇಸ್ಲಾಂ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ ಹೇಳಿದ್ದಾರೆ.
ರಂಜಾನ್ ಮಾಸದಲ್ಲಿ ಇಂತಹ ಘಟನೆ ಬೇಸರ ತಂದಿದೆ. ಗಲಾಟೆ ಮಾಡಿದ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲಿ ಪೊಲೀಸರ ಮೇಲೆ ಕಲ್ಲೆಸೆದಿರೋದು ತನಿಖೆ ಆಗಬೇಕು. ಇದರ ಹಿಂದೆ ಯಾರ ಇದ್ದಾರೆ ಅನ್ನೋದರ ತನಿಖೆ ಆಗಬೇಕು ಎಂದರು.
ನಿಜವಾದ ಆರೋಪಿಗಳನ್ನು ಬಂಧಿಸಿ
ಹುಬ್ಬಳ್ಳಿ: ನಿನ್ನೆ ರಾತ್ರಿ ಕಲ್ಲು ತೂರಾಟ ಘಟನೆಗೆ ಕಾರಣರಾದ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಹಾಗೂ ಅಮಾಯಕರನ್ನು ಬಂಧಿಸಬಾರದೆಂದು ಕಾಂಗ್ರೆಸ್ ನಿಯೋಗವು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.
ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಮುಖಂಡರಾದ ಅನ್ವರ ಮುಧೋಳ, ಬಶೀರ ಗೂಡಮಾಲ್, ಶಾಜಮಾನ್ ಮುಜಾಹಿದ, ಮುಂತಾದವರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಅಮಾಯಕರನ್ನು ಬಂಧಿಸಲಾಗಿದೆ ಅನೇಕರು ಮನವಿ ಮಾಡಿದ್ದು ಯಾವುದೇ ಕಾರಣಕ್ಕೂ ಅಂತಹ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ ೨೦೦೯ ರಿಂದ ಅವಳಿ ನಗರ ಶಾಂತಿ ಇತ್ತು.ಶಾಂತಿ ಸಹಬಾಳ್ವೆಯಿಂದ ಬಾಳುತ್ತಿದ್ದೇವೆ.ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಕೆಲ ಕಿಡಗೇಡಿಗಳು ಜಾತಿ ಧರ್ಮದ ಹೆಸರಲ್ಲಿ ಇಂತಹ ಕೃತ್ಯ ಮಾಡುತ್ತಿದ್ದಾರೆ.ತಪ್ಪಿತಸ್ಥರರಿಗೆ ಕಠಿಣ ಶಿಕ್ಷೆ ಕೊಡಬೇಕು
ಶಾಂತಿ ಕಾಪಾಡಬೇಕಿದೆ ಯಾರು ಕುಮ್ಮಕ್ಕು ನಿಡಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ವಾಗ್ವಾದ : ಶಾಸಕ ಅಬ್ಬಯ್ಯ ಅವರು ಪೊಲೀಸ್ ಠಾಣೆ ಮುಂಬಾಗದಲ್ಲಿ ನಿಂತಿದ್ದಾಗ ಅವರೊಂದಿಗೆ ಪಿಎಸ್ ಐ ಒಬ್ಬರು ಅನುಚಿತವಾಗಿ ವರ್ತಿಸಿದಾಗ ವಾಗ್ವಾದ ನಡೆಯಿತಲ್ಲದೇ ಈ ಬಗ್ಗೆ ಆಯುಕ್ತರಿಗೂ ದೂರು ನೀಡಿದರು.
ಹಿಂಸಾಚಾರ ಸರಿಯಲ್ಲ: ಮುತಾಲಿಕ್
ಹುಬ್ಬಳ್ಳಿ: ಇಸ್ಲಾಂ ಧರ್ಮ ಅಂದರೆ ಶಾಂತಿ ಸೌಹಾರ್ದತೆ ಹಾಗೂ ಹೊಂದಾಣಿಕೆಯಿಂದ ಹೋಗುವಂತದ್ದು, ಆದರೆ ನ್ಯಾಯಯುತವಾಗಿ ಹೋರಾಟ ಮಾಡುವ ಬದಲಿಗೆ ಈ ರೀತಿ ಹಿಂಸಾಚಾರ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ನಿನ್ನೆ ನಡೆದ ಹಿಂಸಾಚಾರವನ್ನು ಖಂಡನೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆಯೊಂದನ್ನು ನೀಡಿರುವ ಅವರು, ಮೆಕ್ಕಾ ಮದೀನಾದ ಮಸೀದಿಯ ಮೇಲೆ ಭಗವಾ ಧ್ವಜವನ್ನು ಹಾರಿಸಿರುವ ಒಂದು ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಇಷ್ಟೊಂದು ಕ್ರೌರ್ಯವನ್ನು ಮೆರೆಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಸ್ಲಾಂ ಧರ್ಮಕ್ಕೆ ತನ್ನದೇ ಆದ ಮಹತ್ವವಿದೆ. ಶಾಂತಿ, ಸೌಹಾರ್ದತೆ, ಹೊಂದಾಣಿಕೆಗೆ ಮತ್ತೊಂದು ಹೆಸರು ಇಸ್ಲಾಂ ಧರ್ಮ ಇಂತಹ ಧರ್ಮದ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಕಲ್ಲು ತೂರಾಟದಂತಹ ಹಿಂಸಾಚಾರ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ನೀವು ನ್ಯಾಯಯುತವಾಗಿ ಹೋರಾಟ ಮಾಡಿ ನ್ಯಾಯವನ್ನು ಪಡೆದುಕೊಳ್ಳ ಬೇಕಿತ್ತು. ಅದನ್ನು ಬಿಟ್ಟು ಈ ರೀತಿಯಲ್ಲಿ ಗಲಾಟೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಗಲಾಟೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಸಿಟಿವಿ ಫೂಟೇಜ ಆಧರಿಸಿ ಕ್ರಮ : ಡಿಸಿ
ಹುಬ್ಬಳ್ಳಿ: ನಿನ್ನೆ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಎಲ್ಲ ಮಾಹಿತಿಗಳನ್ನು ಕಲೆ ಹಾಕಿದ್ದು, ೭೦ಕ್ಕೂ ಅಧಿಕ ಜನರನ್ನು ಬಂಧನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಟಿವಿ ಕ್ಯಾಮರಾವನ್ನಾಧರಿಸಿ ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಸದ್ಯ ಬಂಧನಕೊಳಗಾದವರನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳು ತ್ತೇವೆ ಎಂದರು.
ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ ರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸೇರಿದಂತೆ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
#hubballi-derogatory-social-media-post-triggers-communal-unrest-section-144-imposed-till-april-20