ಪಾಲಿಕೆ ಸದಸ್ಯರ ಅತಂತ್ರ ಸ್ಥಿತಿಗೆ ಕೊನೆಗೂ ಮುಕ್ತಿ
ಹುಬ್ಬಳ್ಳಿ: ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಇಂದು ಅಥವಾ ನಾಳೆಯೊಳಗೆ ದಿನಾಂಕ ನಿಗದಿಯಾಗಲಿದೆಯೆಂಬ ಮಾತು ದಟ್ಟವಾಗಿ ಕೇಳಿ ಬರಲಾರಂಭಿಸಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಂಗಳದಲ್ಲಿ ಚೆಂಡು ಇದ್ದು, ಇವರು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ನಗರಾಭಿವೃದ್ದಿ ಇಲಾಖೆ ಉತ್ತರ ನೀಡಿದ್ದು, ದಿನಾಂಕವನ್ನು ಇಷ್ಟರಲ್ಲೇ ಪ್ರಕಟಿಸುವರೆಂಬ ಮಾಹಿತಿ ಬಂದಿದೆ.
ಪಾಲಿಕೆ ಚುನಾವಣೆ ನಡೆದು ಸುಮಾರು ಏಳು ತಿಂಗಳು ಕಳೆದರೂ ಅಧಿಕಾರವಿಲ್ಲದೇ ಸದಸ್ಯರು ಅತಂತ್ರರಾಗಿದ್ದು, ಕಾಂಗ್ರೆಸ್ ಪಕ್ಷ ಹಲವಾರು ಪ್ರತಿಭಟನೆಗಳನ್ನೂ ಸಹ ನಡೆಸಿದೆ.
ಬಿಜೆಪಿ ಮೂಲಗಳ ಪ್ರಕಾರ ಪ್ರಾದೇಶಿಕ ಆಯುಕ್ತರು ನಗರಾಭಿವೃದ್ದಿ ಇಲಾಖೆ ಮಾರ್ಗದರ್ಶನದ ಅನ್ವಯ ಪ್ರಕಟಿಸಬಹುದೆನ್ನಲಾಗಿದೆ.
ಈಗಾಗಲೇ ಈ ಹಿಂದೆ ಪ್ರಕಟಿಸಿದಂತೆ ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ ಎನ್ನಲಾಗಿದೆ.
ಇಂದು ವಿಧಾನಸಭೆಯಿಂದ ಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಜೂ.೩ರ ದಿನಾಂಕ ಪ್ರಕಟಣೆಗೊಂಡಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೂ ಇಷ್ಟರಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಒಂದು ವೇಳೆ ಘೋಷಣೆಯಾದರೆ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ಮೇಯರ್, ಉಪಮೇಯರ್ ಚುನಾವಣೆಗೆ ಆಸ್ಪದವಿಲ್ಲದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖರು ಇಂದು ನಾಳೆಯೊಳಗೆ ಚುನಾವಣಾ ದಿನಾಂಕ ಘೋಷಿಸುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲವೆನ್ನಲಾಗಿದೆ.
ಸಾಮಾನ್ಯ ಮೀಸಲಾತಿಯನ್ವಯ ಹಿರಿತನದ ಆಧಾರದ ಮೇಲೆ ಈಗಾಗಲೇ ಮೇಯರ್ ಆಗಿ ಅನುಭವವಿರುವ ವೀರಣ್ಣ ಸವಡಿ, (ನಾಲ್ಕನೇ ಬಾರಿಗೆ ಆಯ್ಕೆ) ಅಲ್ಲದೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಥಮ ಪ್ರಜೆಯ ಗಾದಿಯ ಆಳ ಅಗಲ ಬಲ್ಲ ಶಿವು ಹಿರೇಮಠ, ಜೆಡಿಎಸ್ನಲ್ಲಿದ್ದು ವಿಪಕ್ಷ ನಾಯಕನ ಸ್ಥಾನ ನಿರ್ವಹಿಸಿರುವ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ವಿಜಯಾನಂದ ಶೆಟ್ಟಿ, ಉಮೇಶ ಕೌಜಗೇರಿ ಇವರ ಹೆಸರುಗಳು ಮುಂಚೂಣಿಯಲ್ಲಿ ಬರಲಿವೆ.
ಸಾಮಾನ್ಯ ಮೀಸಲಾತಿಯಲ್ಲಿ ಉಳಿದವರಿಗೂ ಮುಕ್ತ ಅವಕಾಶವಿದ್ದು ಈರೇಶ ಅಂಚಟಗೇರಿ, ನಾಲ್ಕನೆ ಬಾರಿ ಗೆಲುವು ಸಾಧಿಸಿರುವ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ ಮುಂತಾದವರು ಸಹ ಪರಿಗಣನೆಗೆ ಬರಬಹುದಾಗಿದ್ದರೂ ಅಂತಿಮವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದವರಿಗೆ ಪಟ್ಟ ಗ್ಯಾರಂಟಿಯಾಗಿದೆ.