ಹುಬ್ಬಳ್ಳಿ-ಧಾರವಾಡ ಸುದ್ದಿ
ಮೇಯರ್ ಚುನಾವಣೆ : ವಿರೋಧಿಗಳ ಒಕ್ಕೂಟಕ್ಕೆ ಕೈ ಕಸರತ್ತು!

ಮೇಯರ್ ಚುನಾವಣೆ : ವಿರೋಧಿಗಳ ಒಕ್ಕೂಟಕ್ಕೆ ಕೈ ಕಸರತ್ತು!

ಬಿಜೆಪಿ ನಿದ್ದೆಗೆಡಿಸಲು ಸದ್ದಿಲ್ಲದೇ ಯತ್ನ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಮಹಾಪೌರರ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಮೂರನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ಅಗತ್ಯ ಸಂಖ್ಯಾಬಲವನ್ನೂ ಹೊಂದಿರುವ ಬಿಜೆಪಿ ಹಠಕ್ಕೆ ಬಿದ್ದಿದ್ದು 33 ಸ್ಥಾನ ಗಳಿಸಿ ಅಚ್ಚರಿಯ ಸಾಧನೆ ಮಾಡಿರುವ ಕಾಂಗ್ರೆಸ್ ವಿರೋಧಿಗಳೆಲ್ಲರ ವಿಶ್ವಾಸಕ್ಕೆ ಪಡೆದು ಸುಲಭ ತುತ್ತಾಗದಂತೆ ನೋಡಿಕೊಳ್ಳಲು ಮುಂದಾಗಿದೆ.
ಬಿಜೆಪಿಯಲ್ಲಿ ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಗೌನ್ ಧರಿಸುವ ಆಕಾಂಕ್ಷಿಗಳಿದ್ದು, ತಮ್ಮದೇ ಲೆಕ್ಕಾಚಾರ, ಗಾಡ್‌ಫಾದರ್‌ಗಳ ಅಭಯದಲ್ಲಿದ್ದು ಸಧ್ಯದ ವಾತಾವರಣದಲ್ಲಿ ಪೇಡೆನಗರಿಯ ಪಾಲಾಗುವ ಲಕ್ಷಣಗಳೆ ಹೆಚ್ಚಾಗಿದೆ.
ಮಹಾನಗರದ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು,ಹಿರಿಯ ಮುಖಂಡರು ಈ ನಿಟ್ಟಿನಲ್ಲಿ ಎಲ್ಲರನ್ನೂ ಕ್ರೋಡಿಕರಿಸುವ ಯತ್ನಕ್ಕೆ ಮುಂದಾಗಿದ್ದು ಇಷ್ಟರಲ್ಲೇ ಪಕ್ಷದಿಂದ ಚುನಾವಣಾ ಉಸ್ತುವಾರಿಯಾಗಿ ಒಬ್ಬರನ್ನು ನೇಮಿಸುವ ಸಾಧ್ಯತೆ ದಟ್ಟವಾಗಿದೆ.
೮೨ಸದಸ್ಯ ಬಲದ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು 42 ಸದಸ್ಯರ ಅವಶ್ಯಕತೆ ಇದೆ. ಕಾಂಗ್ರೆಸ್ 33 ಸದಸ್ಯ ಬಲ ಹೊಂದಿದ್ದು ಜೆಡಿಎಸ್ 1, ಎಂಐಎಂ 3 ಅಲ್ಲದೇ ಐವರು ಜನ ಪಕ್ಷೇತರರು ಇದ್ದು, ಶಾಸಕ ಪ್ರಸಾದ ಅಬ್ಬಯ್ಯ ಅವರ ಮತವು ಇದೆ. ಎಲ್ಲವೂ ಅಂದುಕೊಂಡಂತೆಯೆ ಆದರೆ ಒಟ್ಟೂ ಬಲ 43ಕ್ಕೆ ನಿಲ್ಲಲಿದೆ.
ಬಿಜೆಪಿ 39 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮೂವರು ಶಾಸಕರು, ಓರ್ವ ಸಂಸದರು ಹಾಗೂ ಸಭಾಪತಿ ಹೊರಟ್ಟಿ ಸಹಿತ ಪರಿಷತ್ ಮೂವರು ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆಯಲ್ಲದೇ ಓರ್ವ ಪಕ್ಷೇತರ ಸದಸ್ಯೆ ಶಶಿ ಬಿಜವಾಡ ಪತ್ನಿ ದುರ್ಗಮ್ಮ ಬಿಜವಾಡ ಈಗಾಗಲೇ ಕಮಲ ಹಿಡಿದಿದ್ದು 47ರ ಗಡಿಯಂಚಿಗೆ ತಲುಪಿದೆ.
ಪರಿಷತ್ ಸದಸ್ಯ ಸಲೀಮ್ ಅಹ್ಮದ ತಮ್ಮ ವಾಸಸ್ಥಳ ಹಾವೇರಿಯಲ್ಲಿ ಇಟ್ಟುಕೊಂಡಿರುವುದರಿಂದ ಶ್ರೀನಿವಾಸ ಮಾನೆಯವರಿಗಿದ್ದ ಒಂದು ಮತ ಕಾಂಗ್ರೆಸ್‌ಗೆ ಮೈನಸ್ ಆಗುವುದರಿಂದ ಕನಿಷ್ಟ 2-3 ಸದಸ್ಯರನ್ನು ಸೆಳೆಯುವುದು ಅನಿವಾರ್ಯವಾಗಲಿದೆ.
ಚುನಾವಣೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ಉಸ್ತುವಾರಿಯಾಗಿ ನೇಮಿಸಿದಂತೆ ಪಕ್ಷ ವರ್ಚಸ್ಸುಳ್ಳವರನ್ನೇ ನೇಮಿಸುವ ಸಾಧ್ಯತೆಗಳಿವೆ.
ಬಿಜೆಪಿಯಂತೆಯೇ ಈ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾದವರಲ್ಲಿ ಮೊದಲ ಬಾರಿ ಆಯ್ಕೆಯಾದವರೆ ಬಹುತೇಕರಿದ್ದಾರೆ. ಹಳಬರ ಪೈಕಿ 59 ನೇ ವಾರ್ಡಿನ ಸುವರ್ಣಾ ಕಲಕುಂಟ್ಲ, ದೊರೆರಾಜ ಮಣಿಕುಂಟ್ಲಾ (61) ಪ್ರಮುಖರಾಗಿದ್ದು ಆರೀಫ್ ಭದ್ರಾಪುರ( 54), ನಿರಂಜನ ಹಿರೇಮಠ ( 68) ಅಲ್ಲದೇ ಮಂಗಳಾ ಗೌರಿ( 34) ಧಾರವಾಡದ ಸೂರವ್ವ ಪಾಟೀಲ(2),ರಾಜಶೇಖರ ಕಮತಿ(4), ಶಂಭುಗೌಡ(14),ದೀಪಾ ನೀರಲಕಟ್ಟಿ ( 7), ಕವಿತಾ ಕಬ್ಬೇರ(20) ಮುಂತಾದವರ ಹೆಸರುಗಳು ಮುಖ್ಯವಾಗಿ ಪರಿಗಣನೆಗೆ ಬರಬಹುದು ಎನ್ನಲಾಗುತ್ತಿದೆ.
ಉಳಿದೆಲ್ಲರ ಬೆಂಬಲ ಪಡೆದಲ್ಲಿ ಕಾಂಗ್ರೆಸ್‌ನವರು ಪಕ್ಷೇತರರೊಬ್ಬರಿಗೆ ಅಥವಾ ಎಂಐಎಂನ ಒಬ್ಬರಿಗೆ ಉಪ ಮೇಯರ್ ಸ್ಥಾನ ನೀಡುವುದು ಅನಿವಾರ್ಯವಾಗಲಿದೆ.ಕಮಲ ಪಾಳೆಯದಷ್ಟು ಚಟುವಟಿಕೆ ಇನ್ನೂ ಕೈ ಪಾಳೆಯದಲ್ಲಿ ಗೋಚರಿಸುತ್ತಿಲ್ಲವಾದರೂ ಬಿಜೆಪಿಯವರ ನಿದ್ದೆಗೆಡಿಸುವುದಂತೂ ಖಚಿತ ಎನ್ನುವಂತಹ ವಾತಾವರಣವಿದೆ. ಕಾಂಗ್ರೆಸ್ ಯಾವ ರೀತಿ ಕಾರ್ಯತಂತ್ರ ಮಾಡುತ್ತದೆ ಎಂಬದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ವತಿಯಿಂದ ಅಭ್ಯರ್ಥಿಯನ್ನು ಹಾಕುತ್ತೇವೆ. ರಾಜ್ಯ ಅಧ್ಯಕ್ಷರು ಚಿಂತನ ಶಿಬಿರದಲ್ಲಿ ಪಾಲ್ಗೊಂಡಿದ್ದು ಬಂದ ನಂತರ ಉಸ್ತುವಾರಿ ಕಳುಹಿಸುವುದಾಗಿ ಹೇಳಿದ್ದಾರೆ.ಇಷ್ಟರಲ್ಲೇ ನಮ್ಮ ಎಲ್ಲ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಒಮ್ತತಕ್ಕೆ ಬರಲಾಗುವುದು.

ಅಲ್ತಾಫ್ ಹಳ್ಳೂರ
ಅಧ್ಯಕ್ಷರು,ಮಹಾನಗರ ಜಿಲ್ಲಾ ಕಾಂಗ್ರೆಸ್

ಬೊಮ್ಮಾಯಿ ಮೆಲೆ ಒತ್ತಡ

ಬಿಜೆಪಿಯಲ್ಲೂ ಚಟುವಟಿಕೆಗಳು ಜೋರಾಗಿದ್ದು ಜನತಾದಳ ಪರಿವಾರದಿಂದ ಬಿಜೆಪಿಗೆ ಸೇರ್ಪಡೆಯಾದ ಅನೇಕರು ಈ ಬಾರಿ ಆಯ್ಕೆಯಾಗಿದ್ದು ಬಂದು ಅನೇಕ ವರ್ಷಗಳೇ ಆಗಿದ್ದರೂ ಇದುವರೆಗೆ ಮಹತ್ವದ ಸ್ಥಾನ ಮಾನ ದೊರಕಿಲ್ಲ. ಈ ಬಾರಿ ನೀಡಲೇಬೇಕೆಂದು ಕೆಲವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಒತ್ತಡ ಹೇರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.

 

administrator

Related Articles

Leave a Reply

Your email address will not be published. Required fields are marked *