ಸ್ಮಾರ್ಟ ಕಾಮಗಾರಿ ’ಗುಸು ಗುಸು’ವಿಗೆ ರೆಕ್ಕೆ ಪುಕ್ಕ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಮುಕ್ತಾಯಗೊಂಡ ಯೋಜನೆಗಳ ಲೋಕಾರ್ಪಣೆ ಇಂದು ಇಲ್ಲಿನ ಇಂದಿರಾ ಗಾಂಧಿ ಗಾಜಿನ ಮನೆ ಆವರಣದಲ್ಲಿ ನಡೆಯಿತು.
ಕೆಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಉದ್ಘಾಟನೆ ಬಳಿಕ ಪುಟಾಣಿ ರೈಲು ಹಳಿ ತಪ್ಪಿದ್ದು ಮೊದಲೇ ಸ್ಮಾರ್ಟ ಕಾಮಗಾರಿಗಳ ಬಗೆಗಿನ ವ್ಯಾಪಕ ಗುಸು ಗುಸುವಿಗೆ ಮತ್ತಷ್ಟು ಪುಷ್ಠಿ ಬಂದಂತಾಗಿದೆ.ಅಮಾವಾಸ್ಯೆಯಂದೇ ನಡೆದ ಕಾರ್ಯಕ್ರಮ ಅಪಶಕುನಕ್ಕೆ ಮುನ್ನುಡಿ ಬರೆಯಿತು.
ಚಿಣ್ಣರಿಗೆಂದು ನಿರ್ಮಿಸಿದ್ದ ರೈಲಿನಲ್ಲಿ ಜೋಶಿ ಹಾಗೂ ಶೆಟ್ಟರ್ ಸವಾರಿ ಮಾಡಿ ಉದ್ಘಾಟನೆ ಮಾಡಿ ೫೦ ಮೀಟರು ತೆರಳುತ್ತಿದ್ದಂತೆಯೇ ಮೂರನೇ ಬೋಗಿ ಹಳಿ ತಪ್ಪಿದ್ದು,ಕೆಲ ಕಾಲ ಆತಂಕಕ್ಕೆ ಕಾರಣವಾಯಿತಲ್ಲದೇ ತಡಬಡಿಸಿ ಕೆಳಗಿಳಿಯುವಂತಾಯಿತು.ಯಾವುದೇ ಅಪಾಯವಾಗದೇ ಎಲ್ಲರೂ ಪಾರಾಗಿದ್ದರೂ ಇಂದಿನ ಘಟನೆ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಯಿತು.
ಘಟನೆ ಬಳಿಕ ಅಧಿಕಾರಿಗಳನ್ನು ಸಚಿವ ಜೋಶಿ ತರಾಟೆಗೆ ತೆಗೆದುಕೊಂಡರಲ್ಲದೇ ಸುರಕ್ಷತೆಗೆ,ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಲ್ಲದೇ ಮುಂದೆ ಇಂತಹ ಅವಘಡವಾಗದಂತೆ ಖಡಕ್ ಎಚ್ಚರಿಕೆ ನೀಡಿದರು.
ಮಿತಿಗಿಂತ ಹೆಚ್ಚು ಜನರು ಬಹುತೇಕ ಬಿಜೆಪಿ ಮುಖಂಡರು ರೈಲಿನಲ್ಲಿ ಕುಳಿತಿದ್ದು ಹಳಿ ತಪ್ಪಲು ಕಾರಣ ಎನ್ನಲಾಗಿದೆ. ಈ ಹಿಂದೆ ಮಗುವೊಂದರ ಪ್ರಾಣಕ್ಕೂ ಪುಟಾಣಿ ರೈಲು ಕುತ್ತು ತಂದಿತ್ತು.
ವಾಯುವ್ಯ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಸ್ಮಾರ್ಟ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್. ವಿಶಾಲ, ಪೊಲೀಸ್ ಆಯುಕ್ತ ಲಾಭೂರಾಮ್, ಮಾಜಿ ಮೇಯರ್ ವೀರಣ್ಣ ಸವಡಿ, ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ರೂಪಾ ಶೆಟ್ಟಿ ಮುಂತಾದವರಿದ್ದರು.