ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಸಂಸ್ಥೆ ಆಡಳಿತ ಮಂಡಳಿಗೆ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಚುನಾವಣೆ ಘೋಷಣೆ ಮಾಡಿದೆ.
ನಿನ್ನೆ ದಿ. 25ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗಿದ್ದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚುನಾವಣಾ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದು ದಿ. 29ರಿಂದ ನಾಮಪತ್ರ ಫಾರಂಗಳನ್ನು ವಿತರಿಸಲಿದ್ದು ಫೆ. 5 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಫೆ.6ರಂದು ನಾಮಪತ್ರಗಳ ಪರಿಶೀಲನೆ ನಡೆದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಫೆ.7ರಂದು ಮಧ್ಯಾಹ್ನ 3 ರೊಳಗೆ ನಾಮಪತ್ರ ಹಿಂಪಡೆಯಬಹುದಾಗಿದ್ದು, ಅಗತ್ಯ ಬಿದ್ದರೆ ಅಂದೇ ಚಿಹ್ನೆ ವಿತರಿಸಲಾಗುವುದು.
ಅಗತ್ಯ ಬಿದ್ದರೆ ದಿ. ಫೆ.18ರಂದು ಘಂಟಿಕೇರಿಯ ಅಂಜುಮನ್ ನೆಹರೂ ಕಾಲೇಜಿನಲ್ಲಿ ಬೆಳಿಗ್ಗೆ 8ರಿಂದ 5ರವರೆಗೆ ಮತದಾನ ನಡೆಯಲಿದ್ದು, ಸಾಯಂಕಾಲ 6 ರ ನಂತರ ನೆಹರೂ ಕಾಲೇಜಿನಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುವುದು. ಅಧ್ಯಕ್ಷ ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ, ಗೌರವ ಸಹ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ 52 ಜನರ ಸಮಿತಿ, ಆಸ್ಪತ್ರೆ ಮಂಡಳಿ ಇವುಗಳಿಗೆ ಚುನಾವಣೆ ನಡೆಯಲಿದೆ.
ಈ ಬಾರಿ ಚುನಾವಣೆ ತೀವ್ರ ತುರುಸು ಪಡೆಯುವ ಸಾಧ್ಯತೆಗಳಿದ್ದು ಎರಡು ಮತ್ತು ಮೂರು ಗುಂಪುಗಳು ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ.ಕಳೆದ ಅವಧಿಯಲ್ಲಿ ಮಹ್ಮದ ಯೂಸೂಫ್ ಸವಣೂರ ನೇತೃತ್ವದ ಗುಂಪು ಗೆಲುವು ಸಾಧಿಸಿತ್ತು.