ಕಾಂಗ್ರೆಸ್‌ನತ್ತ ಗಂಡಗಾಳೇಕರ, ಕಮಲ ಕೊಳಕ್ಕೆ ಕ್ಯಾರಕಟ್ಟಿ
ಹುಬ್ಬಳ್ಳಿ: ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಳೆದ ಕೆಲ ವರ್ಷಗಳಿಂದ ಕೇವಲ ಕಮಲಪಡೆಯತ್ತ ಮಾತ್ರ ಎಂಬಂತಿದ್ದ ವಾತಾವರಣ ಬದಲಾಗಲಾರಂಭಿಸಿದೆ. ಈಗಾಗಲೇ ಪಾಲಿಕೆ ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ಗಿರಣಿಚಾಳದ ಬಿಜೆಪಿ ಮುಖಂಡ ಗೋಪಾಲ ಎಣ್ಣೆಚವಂಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪಾಲಿಕೆ ಮಾಜಿ ಸದಸ್ಯ ಅಲ್ಲದೇ ಕ್ರೀಯಾಶೀಲ ಮುಖಂಡ ಎಂದೇ ಹೇಳಲಾಗುವ ಕಲಾಲ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಗಂಡಗಾಳೇಕರ ಸೇರಿದಂತೆ ಅನೇಕರು ಬಿಜೆಪಿ ಬಿಡುವುದು ನಿಶ್ಚಿತವಾಗಿದೆ. ಈ ತಿಂಗಳಾಂತ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವುದಾಗಿ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಘೋಷಿಸಿದ್ದಾರೆ. ಅಲ್ಲದೇ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಬಿಜೆಪಿ ಬಿಡಲು ಸಿದ್ಧತೆ ನಡೆಸಿದ್ದಾರೆ.
ಜೆಡಿಎಸ್‌ನ್ನು ಅಪ್ಪ-ಮಕ್ಕಳ ಪಕ್ಷವೆಂದು ಬಿಜೆಪಿಯವರು ಟೀಕಿಸುತ್ತಾರೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡದಲ್ಲಿ ಅಣ್ಣ-ತಮ್ಮ-ಮಕ್ಕಳ ಪಕ್ಷವಾಗಿದೆ. ಪಕ್ಷ ತೊರೆಯುವುದು ಅನಿವಾರ್ಯವಾಗಿದ್ದು ಶೀಘ್ರ ಬೃಹತ್ ಕಾರ್ಯಕ್ರಮ ಏರ್ಪಡಿಸಿ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಲಕ್ಷ್ಮಣ ಗಂಡಗಾಳೇಕರ ಹೇಳಿದ್ದಾರೆ. ಈ ಪಟ್ಟಿಯಲ್ಲಿ ಬಿಜೆಪಿಯ ಇನ್ನೂ ಅನೇಕ ಧುರೀಣರಿದ್ದಾರೆನ್ನಲಾಗಿದೆ.
ಈಗಾಗಲೇ ಗೋಕುಲ ರಸ್ತೆ ಪ್ರಮುಖ ಮೂರು ವಾರ್ಡಗಳಲ್ಲಿ ’ಬಿಜೆಪಿ ಸ್ವಚ್ಛತಾ’ ಅಭಿಯಾನವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಪುನಶ್ಚೇತನಕ್ಕೆ ಕಾಂಗ್ರೆಸ್ ಮುಖಂಡರ ಸೆಳೆವ ಯತ್ನಕ್ಕೂ ಬಿಜೆಪಿ ಮುಂದಾಗಿದೆ.ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಸಮ್ಮುಖದಲ್ಲಿ ಫೆ. 26 ರಂದು ಕೋಟಿಲಿಂಗನಗರದ ರಾಜೇಶ್ವರಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗುವುದಾಗಿ ಪ್ರಕಟಿಸಿದ್ದಾರೆ.