ಲೋಕಸಭಾ ಚುನಾವಣೆ ಹಿನ್ನೆಲೆ: ಲಿಂಗಾಯತರಿಗೆ ಮಣೆ ಸಾಧ್ಯತೆ
ಪಾಲಿಕೆ ವಶಕ್ಕೆ ಕಾಂಗ್ರೆಸ್ ಕೂಡಾ ಬಿರುಸಿನ ಕಸರತ್ತು
ಹುಬ್ಬಳ್ಳಿ: ರಾಜ್ಯದ ಅತಿದೊಡ್ಡ ಮಹಾನಗರಪಾಲಿಕೆ ಹಿರಿಮೆಯ ಹುಬ್ಬಳ್ಳಿ ಧಾರವಾಡ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಬರುವ ದಿ. 20ರಂದ ಚುನಾವಣೆ ನಡೆಯಲಿದ್ದು, ಗದ್ದುಗೆ ಏರಲು ಆಡಳಿತಾರೂಢ ಕೇಸರಿ ಪಡೆಯಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ.ಅಲ್ಲದೇ ಇದೇ ಮೊದಲ ಬಾರಿಗೆ ಧಾರವಾಡ ಪಾಲಿಕೆ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ.
ಈಗಾಗಲೇ ಬಿಜೆಪಿ ಪಾಳೆಯದಲ್ಲಿ ಚಟುವಟಿಕೆ ಆರಂಭಗೊಂಡಿದ್ದು, ದಿ.12ರಂದು ಪಾಲಿಕೆ ಸದಸ್ಯರ ಸಭೆ ನಡೆದು ವಿಪ್ ಸಹ ವಿತರಿಸಲಾಗಿದ್ದರೂ ದಿ.೧೯ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬ್ರೆಜಿಲ್ ಪ್ರವಾಸದಿಂದ ವಾಪಸ್ ಬಂದ ನಂತರವೇ ಅಂತಿಮಗೊಳ್ಳಲಿದೆ.
ಪ್ರತಿ ಸಲ ಪಾಲಿಕೆ ಚುನಾವಣೆಯಲ್ಲಿ ಜೋಶಿ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ್ ಫರ್ಮಾನೇ ಅಂತಿಮವಾಗಿತ್ತು. ಆದರೆ ಈಗ ಶೆಟ್ಟರ್ ಹೊರ ನಡೆದಿರುವ ಹಿನ್ನೆಲೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಮಾತಿಗೂ ಈ ಬಾರಿ ತೂಕ ಬರಲಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಳೆದ ಬಾರಿ ಧಾರವಾಡಕ್ಕೆ ಹೋದ ಕಾರಣ ಈ ಬಾರಿ ಹುಬ್ಬಳ್ಳಿ ಪಾಲಾಗುವ ಸಾಮಾನ್ಯ ರೂಡಿಯ ಮಾತು ಮೇಲ್ನೋಟಕ್ಕೆ ಕಂಡು ಬರುವಂತಿದ್ದರೂ, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಧಾರವಾಡ ಪಾಲಾದರೂ ಅಚ್ಚರಿಯಿಲ್ಲ.
ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3ಎಐಎಂಐಎಂ, 6 ಜನ ಪಕ್ಷೇತರ ಮತ್ತು ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಮೂವರು ಪಕ್ಷೇತರರು ಬಿಜೆಪಿಗೆ ಈಗಾಗಲೇ ಬೆಂಬಲ ನೀಡಿದ್ದು, ಬಲ 42 ಅಗಲಿದೆ. ನಾಲ್ವರು ಜನಪ್ರತಿನಿಧಿಗಳ ಮತ ಸೇರಿಸಿದರೆ 46 ಆಗಲಿದೆ. ಜೆಡಿಎಸ್‌ನ ಮತ ಸಹಿತ ಕಮಲಕ್ಕೆ ಬೀಳುವುದು ನಿಕ್ಕಿ.
ಕೇಸರಿ ಪಾಳೆಯದಲ್ಲಿ ಹಾಲಿ ಉಪ ಮೇಯರ್ ಉಮಾ ಮುಕುಂದ, ರೂಪಾ ಶೆಟ್ಟಿ, ಸೀಮಾ ಮೊಗಲಿಶೆಟ್ಟರ್, ಮೀನಾಕ್ಷಿ ವಂಟಮೂರಿ ಪೂರ್ವದ ಪೂಜಾ ಶೇಜವಾಡಕರ, ಮಾಜಿ ಮೇಯರ್ ರಾಧಾಬಾಯಿ ಸಫಾರೆ, ಧಾರವಾಡದ ಜ್ಯೋತಿ ಪಾಟೀಲ ಸಹಿತ ಹಲವರ ಹೆಸರು ಮುಂಚೂಣಿಗೆ ಬರಬಹುದಾದರೂ ಲೋಕಸಭಾ ಚುನಾವಣೆ ಲಕ್ಷ್ಯದಲ್ಲಿಟ್ಟುಕೊಂಡು ಲಿಂಗಾಯತರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಒಂದು ವೇಳೆ ಲಿಂಗಾಯತ ಫಾರ್ಮುಲಾ ಅಂತಿಮಗೊಂಡಲ್ಲಿ ಧಾರವಾಡದ ಜ್ಯೋತಿ ಪಾಟೀಲ, ಮೀನಾಕ್ಷಿ ವಂಟಮೂರಿ, ಹಾಗೂ ಸೀಮಾ ಮೊಗಲಿ ಶೆಟ್ಟರ್ ಮಧ್ಯೆ ತುರುಸಿನ ಸ್ಪರ್ಧೆ ನಡೆಯಬಹುದಾಗಿದೆ. ಮೊಗಲಿಶೆಟ್ಟರ್ ಪೈಪೋಟಿಗಿಳಿವ ಸಾಧ್ಯತೆ ಕಡಿಮೆ ಇದೆ.
ಸಾಮಾನ್ಯರಿಗೆ ಮೀಸಲಿರುವ ಉಪಮೇಯರ್ ಆಕಾಂಕ್ಷಿಗಳ ಪೈಕಿ ಶಂಕರ ಶೇಳಕೆ, ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ಮಲ್ಲಿಕಾರ್ಜುನ ಗುಂಡೂರ ಸತೀಶ ಹಾನಗಲ್, ರಾಮಣ್ಣ ಬಡಿಗೇರ ಚಂದ್ರಶೇಖರ ಮನಗುಂಡಿ ಮುಂತಾದವರ ಹೆಸರುಗಳು ಪರಿಗಣನೆಗೆ ಬರಬಹುದಿದ್ದರೂ ಮೇಯರ್ ಎಲ್ಲಿಗೆ ಹೋಗುತ್ತದೆ ಎನ್ನುವುದರ ಮೇಲೆ ನಿರ್ಣಯವಾಗಲಿದೆ
ಪಾಲಿಕೆ ವಶಕ್ಕೆ ಕಾಂಗ್ರೆಸ್ ಕಸರತ್ತು
ಕಾಂಗ್ರೆಸ್ ಪಕ್ಷವೂ ಸಹ ಪ್ರಸಕ್ತ ಚುನಾವಣೆಯಲ್ಲಿ ಹಲವು ಲೆಕ್ಕಾಚಾರಗಳೊಂದಿಗೆ ತಂತ್ರಗಾರಿಕೆ ನಡೆಸುತ್ತಿದ್ದು ಇಂದು ಖಾಸಗಿ ಹೊಟೆಲ್‌ನಲ್ಲಿ ಪಕ್ಷದ ಪಾಲಿಕೆ ಸದಸ್ಯರ ಸಭೆ ಕರೆದಿದೆ. 33 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ಗೆ ಇಬ್ಬರು ಪಕ್ಷೇತರು ಬೆಂಬಲ ನೀಡಲಿದ್ದು(ಅಕ್ಷತಾ ಅಸುಂಡಿ, ಚೇತನ ಹಿರೇಕೆರೂರ) ಇಬ್ಬರು ಜನಪ್ರತಿನಿಧಿಗಳ ಮತ ಸೇರಿದರೆ 37 ಆಗಲಿದ್ದರೂ ವಿನಯ ಕುಲಕರ್ಣಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ. ಒಟ್ಟು ಬಲ 36ಕ್ಕೇರಿ ಎಂಐಎಂ ಮೂವರ ಹಾಗೂ ಪಕ್ಷೇತರ ಬುರ್ಲಿ ಬೆಂಬಲ 40ರ ಗಡಿ ತಲುಪಲಿದೆ. ಗೆಲುವಿಗೆ 5-6 ಮತಗಳ ಕೊರತೆಯಾಗಬಹುದಾಗಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಅನುಯಾಯಿಗಳು ಬಿಜೆಪಿಯಲ್ಲಿ ಹಲವರಿದ್ದು ಅವರು ಏನು ಮಾಡುತ್ತಾರೆ ಎಂಬುದು ಕೆರಳಿಸಿದೆ.
5-6 ಮಂದಿ ಶೆಟ್ಟರ್ ಸೂಚನೆಯಂತೆ ಅವರು ಕಾಂಗ್ರೆಸ್ ಬೆಂಬಲಿಸಿದರೆ ಕಾಂಗ್ರೆಸ್ ಬಾವುಟ ಹಾರಬಹುದಾಗಿದ್ದು, ಸುವರ್ಣ ಕಲ್ಲಕುಂಟ್ಲ, ಕವಿತಾ ಕಬ್ಬೇರ ಇವರುಗಳಿಗೆ ಮೇಯರ್ ಅದೃಷ್ಟ ಖುಲಾಯಿಸಿದರೆ ಅಚ್ಚರಿಯಿಲ್ಲ. ಉಪಮೇಯರ್ ಪಟ್ಟಕ್ಕೆ ಧಾರವಾಡದ ಶಂಭುಗೌಡ ಸಾಲಮನಿ, ಹುಬ್ಬಳ್ಳಿಯ ನಿರಂಜನ ಹಿರೇಮಠ, ಸೆಂಧಿಲ್ ಕುಮಾರ, ಆರೀಫ ಭದ್ರಾಪುರ, ಇಮ್ರಾನ ಯಲಿಗಾರ ಮುಂತಾದವರು ಪರಿಗಣನೆಗೆ ಬರಬಹುದಾಗಿದೆ.